ಕೇರಳ : ಇಂದು ಸಂಜೆ ಶೋರನೂರ್ ರೈಲು ನಿಲ್ದಾಣದ ಬಳಿ ತಿರುವನಂತಪುರಂ ಕಡೆಗೆ ಹೋಗುವ ಕೇರಳ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದು ತಮಿಳುನಾಡಿನ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ನೈರ್ಮಲ್ಯ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಹೌದು ಕೇರಳದ ಪಾಲಕ್ಕಡ್ ರೈಲು ನಿಲ್ದಾಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಶೋರನೂರ್ ಸೇತುವೆಯ ಬಳಿ ರೈಲ್ವೆ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ನವದೆಹಲಿ-ತಿರುವನಂತಪುರಂ ರೈಲು ಮಧ್ಯಾಹ್ನ 3.05 ರ ಸುಮಾರಿಗೆ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ರೈಲ್ವೆಯಿಂದ ನೈರ್ಮಲ್ಯ ಕರ್ತವ್ಯಕ್ಕಾಗಿ ಗುತ್ತಿಗೆ ಪಡೆದಿದ್ದ ಕಾರ್ಮಿಕರ ದೇಹಗಳು ಹಳಿಯಿಂದ ದೂರಕ್ಕೆ ಹೋಗಿ ಬಿದ್ದಿವೆ. ಮೃತರನ್ನು ತಮಿಳುನಾಡಿನ ಸೇಲಂ ಮೂಲದ ಲಕ್ಷ್ಮಣನ್, ವಲ್ಲಿ ಮತ್ತು ಲಕ್ಷ್ಮಣನ್ ಎಂದು ತಿಳಿದುಬಂದಿದ್ದು, ಇನ್ನೋರ್ವ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಮೂರು ಶವಗಳನ್ನು ಈ ಪ್ರದೇಶದಿಂದ ಹೊರತೆಗೆಯಲಾಗಿದ್ದು, ನಾಲ್ಕನೆಯ ಮೃತದೇಹವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ನಾಲ್ಕನೇ ಶವ ಭರತಪುಳ ನದಿಗೆ ಬಿದ್ದಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಕೂಡಲೇ ಸ್ಥಳಕ್ಕೆ ರೈಲ್ವೇ ಪೊಲೀಸರು ಆಗಮಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ರೈಲು ಸಮೀಪಿಸುತ್ತಿರುವುದನ್ನು ಕಾರ್ಮಿಕರು ಗಮನಿಸದೇ ಇರಬಹುದು, ಆದರೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಶೋರನೂರ್ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.