ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ಸಾಧನೆಗಳ ಕುರಿತಂತೆ ಸಿಎಂ ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಆಹ್ವಾನ ನೀಡಿ ಸವಾಲು ಹಾಕಿದ್ದರು. ಅದಕ್ಕೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮರು ಸವಾಲು ಹಾಕಿದ್ದು , ನಿಮ್ಮ ಸರ್ಕಾರದ ಅಭಿವೃದ್ಧಿ ಶೂನ್ಯ, ಭ್ರಷ್ಟ ಆಡಳಿತದ ಕುರಿತಂತೆ ಪ್ರಧಾನಿ ಮೋದಿಯವರು ಯಾಕೆ ನಮ್ಮ ಸಾಮಾನ್ಯ ಕರ್ತರೂ ಕೂಡ ಸಮರ್ಥರಿದ್ದಾರೆ ಎಂದು ಮರು ಸವಾಲು ಹಾಕಿದ್ದಾರೆ.
ಈ ಕುರಿತಂತೆ ಬಿ ವೈ ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುಧೀರ್ಘ ಟ್ವೀಟ್ ಮಾಡಿದ್ದು, ಈ ರಾಜ್ಯದಲ್ಲಿ ನೀವು ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಎಂಬ ಪದ ಸಂಪೂರ್ಣವಾಗಿ ಮಾಸಿ ಹೋಗಿದೆ. ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲ ರಾಜ್ಯದ ಸಂಪನ್ಮೂಲವನ್ನು ಬರಿದು ಮಾಡಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿಕೊಂಡು ಕುಳಿತಿರುವ ನೀವು ಆಧಾರವಿಲ್ಲದೇ ಕೇಂದ್ರದ ಅನುದಾನಗಳು ಹರಿದು ಬರುತ್ತಿಲ್ಲವೆಂದು ಸುಳ್ಳು ಆರೋಪ ಮಾಡುತ್ತೀರಿ. ಆ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದೀರಿ, ಈ ಕುತಂತ್ರದ ಜಾಣ್ಮೆಯ ಆಟ ಹೆಚ್ಚು ದಿನ ನಡೆಯುವುದಿಲ್ಲ.
ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮೇಲೆ ಮುಗಿಬೀಳಲು ಸಮಯ ಕಾಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ರೂ. 52,903 ಕೋಟಿ ಅನುದಾನ ಬಳಸಲಾಗುತ್ತಿದೆ ಎಂದು ಹೇಳಿಕೊಂಡಿದ್ದೀರಿ ಅದು ನಿಜವೇ ಆಗಿದ್ದರೆ, ಕರ್ನಾಟಕದ 224 ಶಾಸಕರ ಕ್ಷೇತ್ರಗಳಿಗೆ ನೀವು ಬಿಡುಗಡೆ ಮಾಡಿರುವ ಅನುದಾನಗಳ ಮಾಹಿತಿ ಬಹಿರಂಗಗೊಳಿಸಿ, ಇದಾಗದಿದ್ದರೆ ಕನಿಷ್ಟ ನಿಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಿರುವ ಅನುದಾನಗಳ ವಿವರವನ್ನಾದರೂ ಜನತೆಯ ಮುಂದಿಡಿ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ನಿರ್ಮಾಣದ ಅಡಿಯಲ್ಲಿ ರಾಜ್ಯದಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯಗಳು ಸಾಲುಸಾಲು. ಅತ್ಯುತ್ತಮ ರೈಲ್ವೇ ವ್ಯವಸ್ಥೆ, ನೂರಾರು ಹೊಸ ಸುಸಜ್ಜಿತ ರೈಲುಗಳ ಸಮರ್ಪಣೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ವಿಮಾನ ನಿಲ್ದಾಣಗಳ ವಿಸ್ತಾರ, ಬೃಹತ್ ಕೈಗಾರಿಕೆಗಳ ಉತ್ತೇಜನ, ರೈತ ಬೆಳೆದ ಬೆಳೆ ರಕ್ಷಿಸಲು ಫಸಲ್ ವಿಮಾ ಯೋಜನೆ, 70 ವರ್ಷ ದಾಟಿದ ಜನರಿಗೆ ಉಚಿತ ಆರೋಗ್ಯ ಸುರಕ್ಷತೆ,
ಮುದ್ರಾ, ವಿಶ್ವಕರ್ಮ ಯೋಜನೆಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಲಕ್ಷಾಂತರ ಜನರಿಗೆ ಆರ್ಥಿಕ ನೆರವು, ಅಧಿಕಾರಕ್ಕೆ ಬಂದ ಮೊದಲ ದಿನವೇ ವಸತಿ ರಹಿತರಿಗಾಗಿ ಮೂರು ಕೋಟಿ ವಸತಿ ನಿರ್ಮಾಣಕ್ಕೆ ನಿರ್ಧಾರ ಕೈಗೊಂಡಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿ ಚೀನಾ, ಪಾಕಿಸ್ಥಾನ ಸೇರಿದಂತೆ ಶತ್ರು ರಾಷ್ಟ್ರಗಳು ಶಸ್ತ್ರಾಸ್ತ್ರಗಳ ತ್ಯಾಗ ಮಾಡಿ ಹೆಜ್ಜೆ ಹಿಂದಿಕ್ಕಿರುವುದು ಮೋದಿಯವರ ಸಾಧನೆಯಲ್ಲವೇ? ಇವೆಲ್ಲವೂ ಮೇಕ್ ಇನ್ ಇಂಡಿಯಾ ಹಾಗೂ ಕೌಶಲ ಭಾರತದ ಹೆಜ್ಜೆ ಗುರುತುಗಳಲ್ಲವೇ?
ನೀವು ಬಹಿರಂಗ ಚರ್ಚೆಗೆ ಬರುವುದಾದರೆ ಬನ್ನಿ ನಿಮಗೆ ಖಂಡಿತ ಸ್ವಾಗತವಿದೆ. ಮೋದಿ ಸರ್ಕಾರದ ಕೊಡುಗೆಗಳು, ಹಿಂದಿನ ನಮ್ಮ ಬಿಜೆಪಿ ಸರ್ಕಾರದ ಯೋಜನೆಗಳ ಪಟ್ಟಿಯನ್ನಿಡಿದು ನಿಮ್ಮ ಮುಂದೆ ಬರುತ್ತೇವೆ. ನಿಮ್ಮ ಸರ್ಕಾರದ ಭ್ರಷ್ಟ ಅಭಿವೃದ್ಧಿ ಶೂನ್ಯ ಆಡಳಿತದ ಇಂಚಿಂಚೂ ಕಟುಸತ್ಯವನ್ನು ಅನಾವರಣ ಮಾಡಲು ಪ್ರಧಾನಿಗಳೇಕೆ? ನಮ್ಮ ಸಾಮಾನ್ಯ ಕಾರ್ಯಕರ್ತನೊಬ್ಬನೇ ಸಮರ್ಥನಿದ್ದಾನೆ. ಈ ಸವಾಲು ಸ್ವೀಕರಿಸಲು ಸಿದ್ಧರಿದ್ದರೆ ಎಂದು? ಎಲ್ಲಿ ? ಎಂದು ಹೇಳಿ ನಾವೂ ಸಿದ್ಧರಿದ್ದೇವೆ.
ಚರ್ಚೆ, ಹೋರಾಟಗಳಿಗೆ ಅಂಜುವ ಪದ ನಮ್ಮ ಪಕ್ಷದ ಸಿದ್ಧಾಂತದ ಪಟ್ಟಿಯಲ್ಲಿ ಇಲ್ಲವೇ ಇಲ್ಲ. ಅದೇನಿದ್ದರೂ ನಿಮ್ಮ ಕಾಂಗ್ರೆಸ್ ಹಾಗೂ ನಿಮ್ಮಲ್ಲಿದೆ. ಇದಕ್ಕೆ ಉದಾಹರಣೆ ನೀವು 14 ನಿವೇಶನ ಹಿಂದಿರುಗಿಸಿ 62 ಕೋಟಿ ಪಡೆಯುವ ಘೋಷಣೆಯ ಸವಾಲಿನಿಂದ ಪಲಾಯನವಾದ ಮಾಡಿದ್ದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇಷ್ಟಾಗಿಯೂ ಕೇಂದ್ರವನ್ನು ಪದೇಪದೇ ಉಲ್ಲೇಖಿಸುತ್ತಲೇ ಇರುತ್ತೀರಿ, ಕನ್ನಡ ನಾಡಿನ ಕಾನೂನು ಸುವ್ಯವಸ್ಥೆಗೆ ಭಂಗ ತಂದ ದೇಶದ್ರೋಹಿ ಶಕ್ತಿಗಳನ್ನು ಬಿಜೆಪಿ ಸರ್ಕಾರದಲ್ಲಿ ಬಂಧಿಸಿ ಸೆರೆಮನೆಗೆ ಕಳುಹಿಸಿದ್ದರೆ, ಅವರನ್ನು ಆರೋಪ ಮುಕ್ತಗೊಳಿಸಲು ಕೇಸುಗಳನ್ನು ವಾಪಾಸು ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳುತ್ತೀರಿ, ನಾಡು ನುಡಿಯ ಕಾಳಜಿಯ ಕುರಿತು ಡೋಂಗಿ… https://t.co/dSYH56LNZu
— Vijayendra Yediyurappa (@BYVijayendra) November 2, 2024