ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶ್ರೀ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ನಮ್ಮ ಕರ್ನಾಟಕವು ಭಾಷೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕøತಿ, ನೆಲ, ಜಲ, ಸಂಪತ್ತುಗಳಿಂದ ಸಮೃದ್ಧವಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದಲು ಎಲ್ಲಾ ಅವಕಾಶಗಳನ್ನು ಒದಗಿಸಿದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಾಲಾ ಶಿಕ್ಷಣವನ್ನು ನೀಡಲು ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಬಾಷೆಯನ್ನು ಪ್ರಥಮ ಭಾಷೆ ಅಥವಾ ದ್ವಿತೀಯ ಭಾಷೆಯಾಗಿ ಭೋದಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 70 ಸಾವಿರಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 1 ಕೋಟಿ 4 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗಳ ಗುಣಮಟ್ಟ ಹೆಚ್ಚಿಸಲು ಹಲವು ನೂತನ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಕಾರ್ಯಕ್ರಮದ ಮೂಲಕ ಪ್ರತಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದೆ. ತಾವು ಕಲಿತ ಶಾಲೆಗಾಗಿ ನೆರವು ನೀಡಲು ಹಳೆಯ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಮುಂದೆ ಬಂದಿದ್ದಾರೆ ಎಂದರು.
ಮಕ್ಕಳು ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯವಂತರಾಗಿದ್ದರೆ ಅವರ ಕಲಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರ ಆ ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಿ, ಮಕ್ಕಳಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುವ ಸಲುವಾಗಿ ಈ ಹಿಂದೆ ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ, ಚಿಕ್ಕೆ, ಬಾಳೆಹಣ್ಣು ನೀಡಲಾಗುತ್ತಿತ್ತು, ಈ ವರ್ಷದಿಂದ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದೊಂದಿಗೆ ಶಾಲಾ ಶಿಕ್ಷಣ ಇಲಾಖೆಯು ವಾರದಲ್ಲಿ 6 ದಿನ ಮೊಟ್ಟೆ ನೀಡುತ್ತಿದೆ. ಈ ಹಿಂದೆ ವಾರದ ಐದು ದಿನಗಳು ಬಿಸಿ ಹಾಲು ನೀಡಲಾಗುತ್ತಿತ್ತು. ಕಳೆದ ಸಾಲಿನಿಂದ ಶ್ರೀ ಸತ್ಯಸಾಯಿ ಟ್ರಸ್ಟ್ ಸಹಯೋಗದಲ್ಲಿ ಹಾಲಿನೊಂದಿಗೆ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್ ಸಹ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್ ಮತ್ತು ನೀರು ಸೌಲಭ್ಯ ಜಾರಿಗೊಳಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳ ನಿರ್ವಹಣಾ ಅನುದಾನವನ್ನು ಹೆಚ್ಚಿಸಲಾಗಿದ್ದು, ರೂ. 117 ಕೋಟಿಯನ್ನು ಖರ್ಚು ಮಾಡಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‍ಆರ್ ನಿಧಿಯಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮೊದಲ ಹಂತದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಗ್ರೀನ್‍ಫೀಲ್ಡ್ ಯೋಜನೆಯಡಿ 100 ಶಾಲೆಗಳನ್ನು ಗುರುತಿಸಲಾಗಿದ್ದು, ಈ ಶಾಲೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಭಾರತ ಸಂವಿಧಾನದ ಪೀಠಿಕೆಯನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರಾರ್ಥನಾ ಸಮಯದಲ್ಲಿ ಓದುವ ಮತ್ತು ಪ್ರತಿಜ್ಞೆ ಮಾಡುವ ಮೂಲಕ ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಸುಮಾರು 1 ಕೋಟಿ 4 ಲಕ್ಷ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದುತ್ತಿದ್ದಾರೆ. ಈಗಿನಿಂದಲೇ ಮಕ್ಕಳಿಗೆ ಸಮಾನತೆ, ಭ್ರಾತೃತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಭಿತ್ತಿ ನಾಡಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಸರ್ಕಾರದ ಆಶಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಿಜ್ವಾನ್ ಅರ್ಷದ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಎಲ್ಲಾ ಕನ್ನಡಗರಿಗೆ ದೊಡ್ಡ ಹಬ್ಬವಾಗಿದೆ. ಕನ್ನಡ ಭಾಷೆಗೆ ಶ್ರೇಷ್ಠ ಪರಂಪರೆ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ನಮ್ಮ ಕಲೆ, ಸಂಸ್ಕøತಿ, ನಾಡಿನ ಹಿರಿಮೆಯು ವಿಶ್ವದಲ್ಲೇ ಪ್ರಸಿದ್ದಿ ಪಡೆದಿದೆ. ಮಾಹಿತಿ ತಂತ್ರಜ್ಞಾನವನ್ನು ಬೆಂಗಳೂರಿನವರು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ. ನಮ್ಮ ರಾಜ್ಯದ ನೆಲ, ಜಲ, ಭಾಷೆ, ಮಣ್ಣಿನ ಕಣ-ಕಣದಲ್ಲೂ ಅಡಗಿದೆ ಎಂದರು.
ಸಮಾರಂಭದಲ್ಲಿ 16 ತಂಡಗಳು ಪಥಸಂಚಲನ ನಡೆಸಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಮಧು ಬಂಗಾರಪ್ಪ ಗೌರವ ವಂದನೆ ಸ್ವೀಕರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಮಗಳನ್ನು ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಶಾಸಕ ಎನ್.ಎ.ಹ್ಯಾರಿಸ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್‍ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್‍ಚಂದ್ರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
BREAKING: ಬೆಂಗಳೂರಲ್ಲಿ ನಿಯಮ ಮೀರಿ ಪಟಾಕಿ ಹಚ್ಚಿದವರಿಗೆ ಪೊಲೀಸರು ಶಾಕ್: ಇಂದು 56 ಕೇಸ್ ದಾಖಲು
BIG NEWS : ಭಾರತದ ಮೊದಲ ಅನಲಾಗ್ ಬಾಹ್ಯಾಕಾಶ ಮಿಷನ್ ಆರಂಭಿಸಿದ `ಇಸ್ರೋ’ | ISRO