ಕೊಪ್ಪಳ : ಇಂದಿನ ಯುವಜನತೆಗೆ ಬೀದಿ ಬದಿಯ ತಿಂಡಿ ತಿನಿಸುಗಳೆಂದರೆ ಬಲು ಇಷ್ಟ. ಅದರಲ್ಲೂ ಎಗ್ ರೈಸ್ ಆಮ್ಲೆಟ್ ಅಂದರೆ ಪಂಚಪ್ರಾಣ.ಆದರೆ ಇದೀಗ ಬೆಚ್ಚಿ ಬೆಳಿಸುವಂತಹ ವಿಷಯ ಬಹಿರಂಗವಾಗಿದ್ದು, ಕೊಪ್ಪಳದ ಬೀದಿ ಬದಿಯಲ್ಲಿ ಎಗ್ ರೈಸ್ ಆಮ್ಲೆಟ್ ಗಳನ್ನು ಕೊಳೆತ ಮೊಟ್ಟೆಯಲ್ಲಿ ತಯಾರಿಸುತ್ತಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು ಕೊಪ್ಪಳದಲ್ಲಿ ಎಗ್ ರೈಸ್ ಆಮ್ಲೆಟ್ ಶಾಪ್ ಗೆ ಪ್ರತಿಯೊಬ್ಬ ಮೊಟ್ಟೆಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆತನ ಮೇಲೆ ಅನುಮಾನ ಕೊಂಡು ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಆತ ಸಾಗಿಸುತ್ತಿದ್ದ ಮೊಟ್ಟೆಗಳನ್ನು ಪರಿಶೀಲಿಸಿದ್ದಾರೆ.ಈ ವೇಳೆ ಅವು ಕೊಳದ ಮೊಟ್ಟೆಗಳಿವೆ ಎಂದು ಅಧಿಕಾರಿಗಳಿಗೆ ತಿಳಿದು ಬಂದಿದೆ.
ಈ ವೇಳೆ ಆತನಿಗೆ ಅಧಿಕಾರಿಗಳು ಈ ಮೊಟ್ಟೆಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಆತ ಇದನ್ನು ಎಗ್ ರೈಸ್ ಮತ್ತು ಆಮ್ಲೆಟ್ ಮಾಡುವ ಶಾಪ್ ಗೆ ಮಾರಾಟಕ್ಕೆಂದು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಮಾರಾಟಗಾರನ ಹೆಸರು ಜಿಲಾನಿ ಎಂದು ತಿಳಿದುಬಂದಿದೆ.ಆತ ನಗರದ ಹೊರವಲಯದಲ್ಲಿರುವ ಪದ್ಮಜಾ ಕೋಳಿ ಫಾರ್ಮ್ನಿಂದ ಕೊಳೆತ ಮೊಟ್ಟೆಗಳನ್ನು ಕಡಿಮೆ ಬೆಲೆಗೆ ತಂದು ಅವುಗಳನ್ನು ಹೋಟೆಲ್ ಮಾಲೀಕರಿಗೆ ನೀಡುತ್ತಿದ್ದ.
ಕೋಳಿ ಫಾರ್ಮ್ನವರು ಚೆನ್ನಾಗಿರುವ ಒಂದು ಮೊಟ್ಟೆಯನ್ನು ಆರು ರೂಪಾಯಿಗೆ ಮಾರಾಟ ಮಾಡಿದರೆ, ಕೊಳೆತ ಮೊಟ್ಟೆಗಳನ್ನು ಎರಡು ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಜಿಲಾನಿ ಅವುಗಳನ್ನು ಒಂದು ಮೊಟ್ಟೆಗೆ ಮೂರು ರೂಪಾಯಿಯಂತೆ ಹೋಟೆಲ್ನವರಿಗೆ ಮಾರಾಟ ಮಾಡುತ್ತಿದ್ದ. ಪ್ರತಿನಿತ್ಯ ಕೊಪ್ಪಳ ನಗರದಲ್ಲಿರುವ ಅನೇಕ ಹೋಟೆಲ್ ಮಾಲೀಕರಿಗೆ ಕೊಳೆತ ಮೊಟ್ಟೆಗಳನ್ನು ತಂದು ನೀಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಕೋಳಿ ಫಾರ್ಮ್ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಧಿಕಾರಿಗಳ ದಾಳಿ ವೇಳೆ ನೂರಾರು ಕೊಳೆತ ಮೊಟ್ಟೆಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಕೊಳೆತ ಮೊಟ್ಟೆಗಳನ್ನು ಹಾಕಿ ಹೋಟೆಲ್ನವರು ಎಗ್ ರೈಸ್, ಆಮ್ಲೆಟ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಇದರಿಂದ ಟೈಫಾಯಿಡ್ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.