ಬೆಂಗಳೂರು : ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿ ಅಧಿಕಾರಕ್ಕೆ ಬಂದಿತ್ತು. ಇದೀಗ ಇದೇ ಒಂದು ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಬೊಕ್ಕಸಕ್ಕೆ ಆದಾಯ ಸಂಗ್ರಹದಲ್ಲಿ 12,000 ಕೋಟಿ ಕೊರತೆ ಇದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ರಾಜಸ್ವ ಹೆಚ್ಚಿಸಲು ಕ್ರಮ ಕೈಗೊಳ್ಳಿ ಮತ್ತು ವೇಗ ನೀಡಿ ಎಂದು ಹಣಕಾಸು ಇಲಾಖೆಯೊಂದಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸರ್ಕಾರಿ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, 2024-25ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಆರಂಭದಲ್ಲಿ 12,000 ಕೋಟಿ ರೂಪಾಯಿ ಕಡಿಮೆ ಹಣ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಪ್ರಯೋಜನಗಳನ್ನು ಪಡೆಯಲು ಅವಿಭಜಿತ ಕುಟುಂಬಗಳು ವಿಭಜನೆಯಾಗುತ್ತಿವೆ. ವಿಭಜನೆಯಾದ ಕುಟುಂಬದ ಮಹಿಳೆಯರು ನಮ್ಮದು ಪ್ರತ್ಯೇಕ ಕುಟುಂಬ ಅಂತ ಹೇಳಿ ಎರಡು ಸಾವಿರ ರೂ. ಪಡೆಯುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಸರ್ಕಾರವು ಗ್ಯಾರಂಟಿ ಯೋಜನೆ ಮರುಪರಿಶೀಲಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಇನ್ನು ಶಕ್ತಿ ಯೋಜನೆ ಮರು ಪರಿಶೀಲನೆ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದು, ಅನೇಕ ಜನರು ನನಗೆ ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ದವಾಗಿದ್ದೇವೆ. ನಮಗೆ ಉಚಿತ ಪ್ರಯಾಣ ಬೇಡ ಎಂದು ಮೆಸೇಜ್ ಹಾಕಿದ್ದಾರೆ. ನಾವು ಟಿಕೆಟ್‌ಗೆ ದುಡ್ಡು ಕೊಡುತ್ತೇವೆ ಆದರೆ ಬಸ್‌ನಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಅನೇಕರು ನಾವು ಟಿಕೆಟ್ ಹಣ ಕೊಡುವುದಕ್ಕೆ ಸಿದ್ಧ ಎಂದು ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳುತ್ತಿದ್ದಾರೆ. ಹೀಗಾಗಿ ನಾವು, ರಾಮಲಿಂಗಾರೆಡ್ಡಿ, ಸರ್ಕಾರದಲ್ಲಿ ಎಲ್ಲಾ ಕೂತು ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇನ್ನೂ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊಡೆತ ಅನುಭವಿಸುತ್ತಿರುವ ಸರ್ಕಾರ, ಇದೀಗ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾಗುವ ಸುಳಿವು ಕೊಟ್ಟಿದೆ.