ಬೆಂಗಳೂರು : ನಗರದಲ್ಲಿ ಕಾನೂನು ಬಾಹಿರ ಕಟ್ಟಡಗಳಿಗೆ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಹೀಗಾಗಿ ನಿಯಮ ಬಾಹಿರ ಕಟ್ಟಡ ನಿರ್ಮಾಣ ಹಾಗೂ ಅದರಿಂದ ಆಗುವ ಅನಾಹುತ ತಡೆಗಟ್ಟಲು ಪ್ರಬಲ ಕಾನೂನು ರೂಪಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಕ್ ಸಿದ್ದರಾಮಯ್ಯ ಅವರು, ನಗರದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿದೆ. ಕಂದಾಯ ಬಡಾವಣೆಗಳಲ್ಲಿ ಹಾಗೂ ಬಿ ಖಾತಾ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯುತ್ತಿಲ್ಲ. ಸೆಟ್ ಬ್ಯಾಕ್ ಬಿಡದೆ ಅಕ್ರಮವಾಗಿ 6 ರಿಂದ 8 ಮಹಡಿ ಕಟ್ಟುತ್ತಿದ್ದಾರೆ. ಇಂತಹ ಅಕ್ರಮ ನಿರ್ಮಾಣದಿಂದ ಇತ್ತೀಚೆಗೆ ಕಟ್ಟಡ ನೆಲಸಮ ಆಗಿ 8 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಅಕ್ರಮ ನಿರ್ಮಾಣಗಳನ್ನು ನಿಯಂತ್ರಿಸಲು ಕಾನೂನು ಭದ್ರ ಮಾಡುತ್ತಿದ್ದೇವೆ ಎಂದರು.
ಇನ್ನು ಬಾಬು ಸಾಬ್ ಪಾಳ್ಯ ಘಟನೆ ಕುರಿತು ಮಾತನಾಡಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ಅಕ್ರಮ ಕಟ್ಟಡಗಳ ನಿರ್ಮಾಣ ನಿಯಂತ್ರಿಸಲು ಬಿಬಿಎಂಪಿ, ಬಿಎಂಆರ್‌ಡಿಎ ಹಾಗೂ ಬಿಡಿಎಗೆ ಹೆಚ್ಚು ಅಧಿಕಾರ ನೀಡುವ ಕೆಲಸ ಮಾಡುತ್ತಿದ್ದೇವೆ. ತನ್ಮೂಲಕ ನಿಯಮ ಬಾಹಿರವಾಗಿ ಆಗುವ ಕಟ್ಟಡ ನಿರ್ಮಾಣ ತಡೆಯಲು ಹಾಗೂ ಅದರ ಅನಾಹುತ ತಡೆಯಲು ಕಾನೂನು ಬಿಗಿ ಮಾಡುತ್ತೇವೆ ಎಂದರು.