ಬೆಂಗಳೂರು: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದ ಉಂಟಾದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಎಸಿ ಮೆಕ್ಯಾನಿಕ್ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮೆಕ್ಯಾನಿಕ್ ನನ್ನು ಚಾಮುಂಡಿ ನಗರದ ನಿವಾಸಿ ರಾಶಿ (24) ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಮೃತ ರಾಶಿ ಮೂಲತಃ ತಮಿಳುನಾಡಿನವನಾಗಿದ್ದು, ಹಲವು ವರ್ಷಗಳ ಹಿಂದೆಯೇ ಆತನ ಕುಟುಂಬ ನಗರಕ್ಕೆ ವಲಸೆ ಬಂದು ಚಾಮುಂಡಿ ನಗರದಲ್ಲಿ ನೆಲೆಸಿತ್ತು. ಈತ ಎಸಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.
ಅ.27 ರಂದು ರಾತ್ರಿ ಕುಟುಂಬದವರೆಲ್ಲ ಊಟ ಮುಗಿಸಿ ನೆಲಮಹಡಿಯಲ್ಲಿ ಮಲಗಿದ್ದರು. ಆಗ ರಾತ್ರಿ 10 ಗಂಟೆ ಸುಮಾರಿಗೆ ಮೊದಲ ಮಹಡಿಯಲ್ಲಿದ್ದ ಅಡುಗೆ ಮನೆಗೆ ರಾಶಿ ತೆರಳಿದ್ದ.ಆ ವೇಳೆ ಅಡುಗೆ ಮನೆ ಸ್ವಿಚ್ ಹಾಕುತ್ತಿದ್ದಂತೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡು ರಾಶಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.