ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಇತ್ತೀಚಿನ ಆದೇಶವು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಗೆ ಚರ್ಚೆ ಮಾಡಲು ಅವಕಾಶ ಒದಗಿಸಿಕೊಟ್ಟಿದೆ.
ಹೌದು ಬಿಜೆಪಿ ಶಾಸಕ ಪ್ರತಿನಿಧಿಸುವ ಜಯನಗರ ವಿಧಾನಸಭಾ ಕ್ಷೇತ್ರವನ್ನು ಈ ಅನುದಾನ ಹಂಚಿಕೆಯಿಂದ ಹೊರಗಿಟ್ಟಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದೆ ವಿಚಾರ ಇಟ್ಟುಕೊಂಡು ಡಿಕೆ ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ವಕೀಲ ಹೆಚ್.ಯೋಗೇಂದ್ರ ಎನ್ನುವರು ಡಿಕೆ ಶಿವಕುಮಾರ್ ವಿರುದ್ಧ ಇಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರ ವಿವೇಚನಾ ಕೋಟಾದಡಿ ಅನುದಾನ ಹಂಚಿಕೆ ಮಾಡದೇ ಪ್ರಮಾಣವಚನದ ಉದ್ದೇಶ ಉಲ್ಲಂಘಿಸಿದ್ದಾರೆ. ಉಪಮುಖ್ಯಮಂತ್ರಿ ಆಗುವ ವೇಳೆ ಸ್ವೀಕರಿಸಿದ್ದ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ವಕೀಲ ಹೆಚ್.ಯೋಗೇಂದ್ರ ಅವರು ಡಿಕೆಶಿ ವಿರುದ್ಧ ದೂರು ನೀಡಿದ್ದಾರೆ. ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಜಯನಗರ ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ನಡುವೆ ಅನುದಾನ ಕದನ ಶುರುವಾಗಿದೆ.
ಡಿಸಿಎಂ ಡಿಕೆಶಿ ಹೇಳಿದ್ದೇನು?
ಬೆಂಗಳೂರಿನ ಜಯನಗರ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡದ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ನಾನೇ ಜಯನಗರ ಕ್ಷೇತ್ರವನ್ನು ಹೊರತುಪಡಿಸಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಆದೇಶಿಸಿದ್ದೇನೆ ಎಂದಿದ್ದಾರೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್, ಡಿಕೆ ಶಿವಕುಮಾರ್ಗೆ ಪತ್ರ ಬರೆದಿದ್ದಾರೆ.