ಹಾವೇರಿ : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರಿಗೆ ಇಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಈ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿ ದರ್ಶನ ಅವರು ನನಗೆ ತುಂಬಾ ಆಪ್ತರು ಅವರಿಗೆ ಜಾಮೀನು ಸಿಕ್ಕಿದ್ದು ಖುಷಿಯಾಗಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ ಎಂದು ಗೊತ್ತಾಯಿತು. ಅವರು ನನ್ನ ಆಪ್ತರು. ಆತ್ಮೀಯರಾಗಿರುವ ಕಾರಣಕ್ಕೆ ಜಾಮೀನು ಸಿಕ್ಕಿರುವುದು ಸಹಜವಾಗಿಯೇ ಖುಷಿ ತಂದಿದೆ. ಅವರ ಆರೋಗ್ಯ ವಿಚಾರಿಸುತ್ತೇನೆ. ಅಲ್ಲದೆ ಈ ಘಟನೆಗೂ ಮುನ್ನ ಆಗಾಗ ಭೇಟಿಯಾಗುತ್ತಿದ್ದೆವು ಎಂದು ತಿಳಿಸಿದರು.
ಇದೆ ವೇಳೆ ಉಪಚುನಾವಣೆ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡಿದ್ದಾರೆ. ಆದರೆ ಬೊಮ್ಮಾಯಿ ರಾಜ್ಯ ಇರಲಿ, ತಮ್ಮ ಕ್ಷೇತ್ರವನ್ನೂ ಅಭಿವೃದ್ಧಿ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 8 ಸಾವಿರ ಮತಗಳ ಲೀಡ್ ಸಿಕ್ಕಿತ್ತು. ಆಗ ಬೊಮ್ಮಾಯಿ ಶೇಂಗಾ ಬೀಜ ತಿನ್ನುತ್ತಿದ್ದರಾ? ಎಂದು ಜಮೀರ್ ಇದೇ ವೇಳೆ ಟೀಕಿಸಿದರು.