ಹಾಸನ : ಬಿಜೆಪಿ ಪಕ್ಷದ ವಿರುದ್ಧ ಆಗಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕುತ್ತಾರೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿ ವೈ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿರುತ್ತಾರೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಈ ವಿಚಾರವಾಗಿ ಮಾತನಾಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಬಿವೈ ವಿಜಯೇಂದ್ರ ತಿಳಿಸಿದರು.
ಹಾಸನದಲ್ಲಿ ಹಾಸನಾಂಬೆ ದೇವಿ ದರ್ಶನ ಪಡೆದು ಸುದ್ದಿಗಾರರಿಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯತ್ನಾಳ್, ಜಾರಕಿಹೊಳಿ ಅವರ ಅಸಮಾಧಾನ ಹೊರಹಾಕಲು ಬೇರೆ ವ್ಯವಸ್ಥೆ ಮಾಡಿಕೊಡಬೇಕು. ಆ ದಿಕ್ಕಿನಲ್ಲಿ ಯೋಚನೆ ಮಾಡುತ್ತಿದ್ದೇವೆ. ನಾನಂತೂ ಅದರ ಬಗ್ಗೆ ಏನು ತಲೆಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಮಾಡಲು ಬೇಕಾದಷ್ಟು ಕೆಲಸವಿದೆ. ಸಂಘಟನೆ ಕೆಲಸ ಇದೆ, ಉಪಚುನಾವಣೆ ಇದೆ. ಇವತ್ತು ವಕ್ಫ್ ವಿಚಾರವಾಗಿ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಹೊಂದಾಣಿಕೆ ವಾಕ್ಸಮರ ತಾರಕಕ್ಕೇರಿತ್ತು. ಚುನಾವಣೆಯಲ್ಲಿ ಹೀನಾಯ ಸೋಲಿಗೆ ಹೊಂದಾಣಿಕೆ ರಾಜಕಾರಣವೇ ಮುಖ್ಯ ಕಾರಣ ಎಂಬ ಸ್ವಪಕ್ಷೀಯರ ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ವಿಜಯೇಂದ್ರ, ಯಾರ್ಯಾರು ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುತ್ತಾರೆ ಒಬ್ಬೊಬ್ಬರನ್ನೇ ಪಕ್ಷದಿಂದ ಹೊರ ಹಾಕುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ನಮ್ಮ ಪಕ್ಷ ಶುದ್ದೀಕರಣ ಅಗಬೇಕೆಂದು ಅನೇಕ ಹಿರಿಯರ ಆಸೆ ಇತ್ತು. ಅವರ ಆಸೆಗೆ ತಕ್ಕಂತೆ ಶುದ್ದೀಕರಣ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ.