ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಡಾದ ಮಾಜಿ ಆಯುಕ್ತ ನಟೇಶನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸತತ 36 ಗಂಟೆಗಳಿಂದ ಇಡಿ ಅಧಿಕಾರಿಗಳು ಮುಡಾ ಹಗರಣಕ್ಕೆ ಸಂಬಂಧಿಸಿದವರ ಮನೆಯ ಮೇಲೆ ದಾಳಿ ಮಾಡಿದ್ದು ಅಲ್ಲದೆ, ಹಲವು ಮಹತ್ವದ ದಾಖಲೆ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಆಯುಕ್ತ ನಟೇಶನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮುಡಾದಿಂದ 50:50 ಅನುಪಾತದಲ್ಲಿ 928 ನಿವೇಶನಗಳ ಅಕ್ರಮ ಹಂಚಿಕೆಯಾಗಲು ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಕಾರಣ ಎಂದು ಆರೋಪಿಸಲಾಗಿತ್ತು.ಹಾಗಾಗಿ ನಿನ್ನೆ ಇಡಿ ಅಧಿಕಾರಿಗಳು ನಟೇಶ್ ಮನೆಯ ಮೇಲೆ ದಾಳಿ ಮಾಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ, ತನಿಖೆಗೆ ನಟೇಶ್ ಅವರು ಸಹಕರಿಸಿಲ್ಲ ಎನ್ನಲಾಗಿದೆ. ನಾನು ಪ್ರಕರಣದಲ್ಲಿ ತಪ್ಪೆ ಮಾಡಿಲ್ಲ ಎಂದು ತಿಳಿಸಿದ್ದರು.
ನಟೇಶ್ ಮುಡಾ ಆಯುಕ್ತರಾಗಿದ್ದಾಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯಾಗಿತ್ತು. ಈ ನೆಲೆಯಲ್ಲಿ ನಟೇಶ್ ನಿವಾಸದ ಮೇಲೆ ನಿನ್ನೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಲ್ಲದೆ ಇನ್ನೊಬ್ಬ ಮಾಜಿ ಆಯುಕ್ತ ದಿನೇಶ್ ಕುಮಾರ್ ಮೇಲು ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ವಾಕಿಂಗ್ ಮಾಡುವಾಗ ಮಾಹಿತಿ ತಿಳಿದ ದಿನೇಶ್ ಕುಮಾರ್ ಪರಾರಿಯಾಗಿದ್ದಾರೆ. ಇಂದು ಇಡಿ ಅಧಿಕಾರಿಗಳು ಅವರ ಮನೆಗೆ ನೋಟಿಸ್ ಅಂಟಿಸಿದ್ದು ವಿಚಾರಣೆಗೆ ಆಗಮಿಸದಿದ್ದರೆ ವಾರಂಟ್ ನೀಡಿ ಬಂಧಿಸುವ ಎಚ್ಚರಿಕೆ ನೀಡಿದ್ದಾರೆ.