ಬೆಂಗಳೂರು : ವಿಜಯಪುರದಲ್ಲಿ ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ನೋಟಿಸ್ ನೀಡಿದ್ದನ್ನು ವಿರೋಧಿಸಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರು ನಮ್ಮ ದೇಶದಲ್ಲಿ ಇದ್ದದ್ದು ಸಂವಿಧಾನ ಮಾತ್ರ. ಷರಿಯಾ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ ಎಂದು ಎಂಎಲ್ಸಿ ಸಿ.ಟಿ.ರವಿ ಅವರು ಸಚಿವ ಜಮೀರ್ ಅಹ್ಮದ್ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾನ ಕೊಟ್ಟಿದ್ದೇ ನಿಜವಾಗಿದ್ರೆ, ಸೂಕ್ತ ದಾಖಲೆ ಇದ್ರೆ ಅದು ವಕ್ಫ್ ಆಸ್ತಿ ಆಗುತ್ತದೆ. ಸರ್ಕಾರ ಗ್ರ್ಯಾಂಟ್ ಕೊಟ್ರೂ ಅದು ವಕ್ಫ್ ಆಸ್ತಿ ಅಂತ ಪರಿಗಣಿಸಬಹುದು. ವಕ್ಫ್ ಬೋರ್ಡ್ ಖರೀದಿಸಿದ್ರೆ ಅದು ವಕ್ಫ್ ಆಸ್ತಿ ಅಂತ ಹೇಳಬಹುದು. ಆದರೆ ಸ್ವಯಂಪ್ರೇರಿತವಾಗಿ ವಕ್ಫ್ ಎಂದು ಘೋಷಿಸಿಕೊಳ್ಳುವ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರೆ ಅದು ವಕ್ಫ್ ಆಸ್ತಿ ಆಗಲ್ಲ ಎಂದರು.
ವಕ್ಫ್ ಆಸ್ತಿ ಹೆಸರಲ್ಲಿ ರೈತರಿಗೆ ನೋಟಿಸ್ ಕೊಡೋದನ್ನು ತಕ್ಷಣ ನಿಲ್ಲಿಸಲಿ. ಜಮೀರ್ ಅಹ್ಮದ್ ಜಿಲ್ಲಾ ಪ್ರವಾಸ ಮಾಡಿ, ಅಧಿಕಾರಿಗಳಿಗೆ ಧಮ್ಕಿ ಹಾಕಿ ನೋಟಿಸ್ ಕೊಡಬೇಕು ಅಂತ ಮೌಖಿಕ ಸೂಚನೆ ಕೊಟ್ಟಿದ್ದರು. ನಂತರ ಇದೆಲ್ಲವೂ ಶುರುವಾಯ್ತು. ಈ ನೆಲದ ಆಸ್ತಿಯನ್ನು ನಮ್ಮದೆಂದು ಹೇಳೋಕೆ ಅವಕಾಶ ಕೊಡಲ್ಲ ಎಂದರು.
ಸಂವಿಧಾನದ ಪ್ರಕಾರ ಯಾರದ್ದೋ ಆಸ್ತಿಯನ್ನು ನಮ್ಮ ಅಪ್ಪನ ಆಸ್ತಿ, ವಕ್ಫ್ ಬೋರ್ಡ್ ಆಸ್ತಿ ಅಂತ ಹೇಳಲು ಅವಕಾಶ ಇಲ್ಲ. ವಕ್ಫ್ ತನ್ನದು ಅಂತ ಹೇಳಿಕೊಳ್ಳುವ ಆಸ್ತಿ ಬಗ್ಗೆ ಕೂಲಂಕಷ ಪರಿಶೀಲನೆ ಆಗಬೇಕಿದೆ.ಇಲ್ಲಿರೋದು ಸಂವಿಧಾನ ಮಾತ್ರ. ಷರಿಯಾ ಕಾನೂನು ಬೇಕು ಅನ್ನುವವರು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ. ಸಂವಿಧಾನ ಬೇಕು ಅಂದ್ರೆ ಮಾತ್ರ ಇಲ್ಲಿರಿ, ಷರಿಯಾ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ ಎಂದು ಕಿಡಿ ಕಾರಿದರು.