ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳ 4, 5 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಓದು ಕರ್ನಾಟಕ ಚಟುವಟಿಕೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯದ ಸರ್ಕಾರಿ ಶಾಲೆಗಳ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಕಲಿಕಾ ಸಾಮಾಗ್ರಿಗಳನ್ನು ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸಲು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವ ರೂ.14.2 ಕೋಟಿ ವೆಚ್ಚದ “ಓದು ಕರ್ನಾಟಕ” ಚಟುವಟಿಕೆಗೆ ಅನುಮೋದನೆ ನೀಡಲಾಗಿದೆ.
ದೇವನಹಳ್ಳಿ – ವಿಜಯಪುರ – ಹೆಚ್ ಕ್ರಾಸ್ – ವೇಮಗಲ್ – ಮಾಲೂರು – ತಮಿಳುನಾಡು ಗಡಿವರೆಗೆ 110.4 ಕಿ.ಮೀ. ಉದ್ದದ ರಸ್ತೆಯನ್ನು ಹೈಬ್ರಿಡ್‌ವರ್ಷಾಸನ ಮಾದರಿಯಲ್ಲಿ ರೂ.3,190 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಗರಕ್ಕೆ ಗುಳಬಾಳ ಹಳ್ಳಿ ಹತ್ತಿರದ ಕೃಷ್ಣಾನದಿ ಮೂಲದಿಂದ ಸುಧಾರಿತ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ರೂ.177 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಮತ್ತು ಅನುದಾನ ಬಿಡುಗಡೆಗೆ ತೀರ್ಮಾನ ಮಾಡಲಾಗಿದೆ.
ಬೀಜೋತ್ಪಾದನ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ / ಪರತಂತ್ರ ಜೀವಿ ಪ್ರಯೋಗಾಲಯಗಳು ಇವುಗಳನ್ನು ಒಂದೇ ಸೂರಿನಡಿ ತಂದು ಅಭಿವೃದ್ಧಿಪಡಿಸಲು “ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ’ ಸ್ಥಾಪನೆಗೆ ನಿರ್ಧಾರಿಸಲಾಗಿದೆ.
ಕೆಎಸ್‌ಆರ್‌ಪಿ ಒಂದನೇ ಪಡೆಯ ಆವರಣದಲ್ಲಿ 3.16 ಎಕರೆ ಜಾಗದಲ್ಲಿ ಪೊಲೀಸ್ ಇಲಾಖೆಯ ಸೆಂಟ್ರಲ್ ಕಮಾಂಡ್ ಸೆಂಟರ್ ಒಳಗೊಂಡಂತೆ ಸುಸಂಘಟಿತ ಪೊಲೀಸ್ ಭವನ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ರೂ.102 ಕೋಟಿಗೆ ಅನುಮೋದನೆ. ಬೆಂಗಳೂರಿನ ಸೂರ್ಯನಗರದ ಒಂದನೇ ಹಂತದ ಬಡಾವಣೆಯಲ್ಲಿ ಕ್ಲಬ್‌ಹೌಸ್, ಲೈಬ್ರೆರಿ, ಜಿಮ್, ಒಳಾಂಗಣ ಕ್ರೀಡಾಂಗಣ, ಕಾರು ಪಾರ್ಕಿಂಗ್‌ಗಳನ್ನು ಒಳಗೊಂಡ ಅತ್ಯಾಧುನಿಕ ಬಹುಮಹಡಿ ವಸತಿ ಸಮುಚ್ಚಯವನ್ನು ರೂ.101 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ ಮೂಲಕ ನಿರ್ಮಿಸಲು ನಿರ್ಧಾರಿಸಲಾಗಿದೆ.