ಬೆಂಗಳೂರು : ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟೀಸ್ ಕೊಟ್ಟಿಲ್ಲ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಈ ವಿಚಾರದಲ್ಲಿ ಬಿಜೆಪಿ ಬೇಕೆಂದೇ ರಾಜಕೀಯ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಒಂದು ಕಾಲಕ್ಕೆ 14,201.32 ಎಕರೆ ವಕ್ಫ್ ಮಂಡಳಿ ಆಸ್ತಿಯಾಗಿತ್ತು. ಈ ಪೈಕಿ ಭೂ ಸುಧಾರಣಾ ಕಾಯ್ದೆಯಡಿ 11,835.29 ಎಕರೆ ಮತ್ತು ಇನಾಂ ರದ್ದತಿ ಕಾಯ್ದೆಯಡಿ 1,459.26 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ ಎಂದರು.
ಜಮೀರ್ ಅಹ್ಮದ್ ಮಾತನಾಡಿ, ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಮಂಡಳಿಯದೇ ವಿನಃ 1,200 ಎಕರೆ ಅಲ್ಲ. ಅದೆಲ್ಲ ರೈತರದೇ ಆಗಿದೆ. ವಿಜಯಪುರದಲ್ಲಿ 1,345 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಇದು ಯಾರಿಗೂ ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಇದರಲ್ಲಿಯೂ ಸುಮಾರು 26 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಕೋರ್ಟ್ನಲ್ಲಿದೆ. ಇದು ಬಿಟ್ಟರೂ 1,319 ಎಕರೆ ವಕ್ಪ್ ಆಸ್ತಿ ಅಕ್ರಮವಾಗಿ ಬೇರೆ ವ್ಯಕ್ತಿ /ಸಂಸ್ಥೆಗಳ ವಶದಲ್ಲಿ ಇದ್ದು, ಅದನ್ನು ಸರಿ ಮಾಡಿಕೊಡಲು ಕೇಳಲಾಗಿದೆ. ಇದು ಬಿಟ್ಟರೆ ನಮಗೆ ಬೇರೆ ಯಾರ ಆಸ್ತಿಯೂ ಬೇಡ ಎಂದರು.
ಎಂ.ಬಿ ಪಾಟೀಲ್ ಮಾತನಾಡಿ, ವಿಜಯಪುರ ಪ್ರಕರಣದಲ್ಲಿ 1964ರಿಂದ 1973ರವರೆಗಿನ ಕಂದಾಯ ಮತ್ತು ವಕ್ಫ್ ದಾಖಲೆಗಳನ್ನು ತೌಲನಿಕವಾಗಿ ಪರಿಶೀಲಿಸಲು ಆದೇಶ ನೀಡಲಾಗಿದೆ.ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಜನರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಬಿಜೆಪಿ ಮುಖಂಡರಿಂದ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.