ಕಲಬುರ್ಗಿ : ಸುಮಾರು 13 ವರ್ಷಗಳ ಕಾಲ ಪ್ರೀತಿಸಿದ ಹುಡುಗಿ ಬೇರೊಬ್ಬನ ಜೊತೆಗೆ ಮದುವೆಯಾಗಿದ್ದು ಅಲ್ಲದೆ,ಮದುವೆಯಾದ ಬಳಿಕ ಸುಮ್ಮನಿರದೆ ಪುನಃ ತನ್ನನ್ನು ಮದುವೆಯಾಗು ಇಲ್ಲವಾದರೆ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಬೆದರಿಕೆ ಒಡ್ಡಿದ್ದಾಳೆ. ಇದರಿಂದ ಮನನೊಂದ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಡಕಿ ಗ್ರಾಮದಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಯುವಕನನ್ನು ದೇವೇಂದ್ರಪ್ಪ ಕಲಕೇರಿ (32) ಎಂದು ತಿಳಿದುಬಂದಿದೆ. ದೇವಿಂದ್ರಪ್ಪ ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿದ್ದ. ನಾಲ್ಕು ವರ್ಷದ ಹಿಂದೇಯೆ ಯುವತಿ ಬೇರೊಬ್ಬನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಚಿಕ್ಕಪ್ಪ ಹಾಗೂ ಗಂಡನ ಜೊತೆಗೆ ವಾಸಿಸುತ್ತಿದ್ದಳು. ಮದುವೆ ಆದರೂ ಕೂಡ ದೇವೇಂದ್ರಪ್ಪನಿಗೆ ಕರೆ ಮಾಡಿ ನನ್ನನ್ನು ಮದುವೆಯಾಗುವಂತೆ ಎಂದು ದುಂಬಾಲು ಬಿದ್ದಿದ್ದಳು.
ಯುವತಿ ಒತ್ತಾಯಿಸಿದರಿಂದ ದೇವೇಂದ್ರಪ್ಪ ಬೆಂಗಳೂರಿಗೆ ತೆರಳಿದ್ದಾನೆ.ಅಲ್ಲಿ ಚಿಕ್ಕಪ್ಪ ಎಂದು ಪರಿಚಯಿಸಿದ್ದ ವ್ಯಕ್ತಿಯೊಂದಿಗೆ ಮಲಗಿರುವುದನ್ನು ನೋಡಿ ತಾನು ಆಘಾತಗೊಂಡಿದ್ದಾಗಿಯೂ, ನಂತರ ನಡೆದ ಮಾತಿನ ಚಕಮಕಿ ವೇಳೆ ಆ ವ್ಯಕ್ತಿಗೆ ಚಾಕು ಇರಿದ ಕಾರಣಕ್ಕಾಗಿ ತನ್ನ ಮೇಲೆ ಸ್ಥಳದಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದರಿಂದ ತಾನು ಅಲ್ಲಿಂದ ಓಡಿ ಬಂದಿದ್ದಾನೆ.
ಬೇರೆ ವ್ಯಕ್ತಿಯೊಂದಿಗೆ ಯುವತಿ ಮಲಗಿಕೊಂಡಿರುವುದನ್ನು ಕಣ್ಣಾರೆ ಕಂಡು ನಾನು ಬೇರೆ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ದೇವೇಂದ್ರಪ್ಪ ತಿಳಿಸಿದಾಗ, ಯುವತಿ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ.ಚಾಕು ಇರಿತ ಕೇಸ್ ಸಂಬಂಧ ಕೊಡಿಗೇಹಳ್ಳಿ ಪೊಲೀಸರು ದೇವೇಂದ್ರಪ್ಪನನ್ನು ಹುಡುಕಿಕೊಂಡು ಹೋಗಿದ್ದರು. ಆರೋಪಿಯನ್ನು ಬಂಧಿಸಲು ಆಗಮಿಸುವ ಮುನ್ನವೇ ಆತ ನೇಣಿಗೆ ಶರಣಾಗಿದ್ದ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.