ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ ಎನ್ನುವಂತೆ, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 2022 ರನ್ವಯ ಕರ್ನಾಟಕ ಸರ್ಕಾರಿ ನೌಕರರು ಪಾವತಿಸಬೇಕಾದ ಕನಿಷ್ಠ ಮಾಸಿಕ ವಿಮಾ ಕಂತಿನ ದರದ ನಿಗದಿ ಪಡಿಸಲಾಗಿದೆ. ಹಾಗಾದ್ರೇ ಎಷ್ಟು ವೇತನ ತೆಗೆದುಕೊಳ್ಳುವವರಿಗೆ ಎಷ್ಟು ವಿಮಾ ಕಂತಿನ ದರ ಕಡಿತವಾಗಲಿದೆ ಎನ್ನುವ ಬಗ್ಗೆ ಮುಂದೆ ಓದಿ.
ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 ರ (1990 ರ ಕರ್ನಾಟಕ ಅಧಿನಿಯಮ 14) ರ 3 ನೇ ಪ್ರಕರಣದ (2) ನೇ ಉಪ ಪ್ರಕರಣದ ಪರಂತುಕದೊಡನೆ ಓದಿಕೊಂಡು ಅದೇ 3 ನೇ ಪ್ರಕರಣದ (1) ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958 ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದೆ, ಅಂದರೆ:-
1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು 2024 ರ ಆಗಸ್ಟ್ ಒಂದನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
2. ನಿಯಮ 8 ರ ತಿದ್ದುಪಡಿ:- ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು 1958 ರ, ನಿಯಮ 8 ರ ‘ಕೋಷ್ಟಕ’ ದಲ್ಲಿ ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಈ ಕೆಳಕಂಡಂತೆ ಪ್ರತಿಸ್ಥಾಪಿತವಾಗಿರುತ್ತದೆ ಎಂದಿದ್ದಾರೆ.