ಬೆಂಗಳೂರು : ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ವಂಚನೆಗೆ ಸೈಬರ್ ವಂಚಕರು ಹೊಸ ರೀತಿಯ ತಂತ್ರ ಅನುಸರಿಸುತ್ತಿದ್ದು, ಪೊಲೀಸರ ವೇಷ ಧರಿಸಿ ವಿಡಿಯೋ ಕಾಲ್ ಮಾಡಿ ಜನರಲ್ಲಿ ಹಣ ದೋಚುತ್ತಿದ್ದಾರೆ.
ಹೌದು, ಧಾರವಾಡದಲ್ಲಿ ಈ ವಂಚಕ ಗ್ಯಾಂಗ್ ಸಕ್ರಿಯವಾಗಿದ್ದು, ಗ್ರಾಮೀಣ ಜನರು ಸೇರಿದಂತೆ ಹಲವರಿಗೆ ವಿಡಿಯೋ ಕಾಲ್ ಮಾಡಿ ಹೆದರಿಸಿ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈ ಪೊಲೀಸರೆಂದು ವಿಡಿಯೋ ಕಾಲ್ ಮಾಡುವ ನಕಲಿ ಪೊಲೀಸರು, ಜನರಿಂದ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದಾರೆ.
ಜನರಿಗೆ ಮೊದಲಿಗೆ ಕರೆ ಮಾಡುವ ಇವರು ನೀವು ಆರ್ಡರ್ ಮಾಡಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ. ಪೊಲೀಸ್ ಠಾಣೆಗೆ ಬಂದು ಸೆಟ್ಲ್ ಮಾಡಿಕೊಳ್ಳಿ ಹಾಗೂ ನೀವು ಹೆಚ್ಚಿನ ಹಣ ವಹಿವಾಟು ಮಾಡಿದ್ದೀರಿ, ಹಣಕಾಸು ಇಲಾಖೆ ನಮಗೆ ಮಾಹಿತಿ ನೀಡಿ ಎಂದು ನಕಲಿ ಪೊಲೀಸ್ ಠಾಣೆಯಲ್ಲಿ ಕೂತು ವಿಡಿಯೋ ಕಾಲ್ ಮಾಡಿ ವಂಚಿಸುತ್ತಿದ್ದಾರೆ.