ಬೆಂಗಳೂರು : ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ ಹಿಂಗಾರು ಮಳೆಯಿಂದ ಹಾನಿಯಾದ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರೀ ಮಳೆಯಾಗಿದ್ದು, ಮಳೆಯಿಂದ ಹಾನಿಗೊಳಗಾದ ಜಿಲ್ಲೆಯ ಜಿಲ್ಲಾಧಿಕಾರಿಗಳು, ಸಿಇಒಗಳೊಂದಿಗೆ ಇಂದು ಸಿಎಂ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮಳೆ ಹಾನಿ, ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿದ್ದಾರೆ.
ಹಿಂಗಾರು ಹಂಗಾಮಿನ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಈ ಬಾರಿ ವಾಡಿಕೆಗಿಂತ ಶೇ 66 ರಷ್ಟು ಹೆಚ್ಚು ಮಳೆಯಾಗಿದ್ದು, ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಮುಂದಿನ ಮೂರು ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಬರುವ 15 ದಿನಗಳಲ್ಲಿ ಡಿಬಿಟಿ ಮೂಲಕ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.