ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಸಾಲು ಸಾಲು ರಜೆಯ ಕಾರಣದಿಂದಾಗಿ ಖಾಸಗಿ ಬಸ್ ಗಳು ದುಬಾರಿ ದರವನ್ನು ಏರಿಕೆ ಮಾಡಿ, ಪ್ರಯಾಣಿಕರಿಗೆ ಬರೆ ಎಳೆಯೋದು ಸರ್ವೇ ಸಾಮಾನ್ಯ. ಇದಕ್ಕೂ ಮುಚ್ಚೆಯೇ ಎಚ್ಚೆತ್ತುಕೊಂಡಿರುವಂತ ಸಾರಿಗೆ ಇಲಾಖೆಯು, ಹಬ್ಬದ ಹೊತ್ತಲ್ಲೇ ಖಾಸಗಿ ಬಸ್ ಗಳು ದರ ಹೆಚ್ಚಿಸುವಂತಿಲ್ಲ. ನಿಯಮ ಮೀರಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಬಸ್ಸಿನ ಲೈಸೆನ್ಸ್ ಕೂಡ ರದ್ದುಗೊಳಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ಪತ್ರಿಕಾ ಸಾರಿಗೆ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣದ ದರವನ್ನು ಹೆಚ್ಚಿಸುವಂತಿಲ್ಲ. ಸಾರಿಗೆ ಇಲಾಖೆಯಿಂದ ಖಾಸಗಿ ಬಸ್ ಗಳ ಬುಕ್ಕಿಂಗ್ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಖಾಸಗಿ ಬಸ್ ನಿಲ್ದಾಣಗಳಲ್ಲೂ ಸಾರಿಗೆ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗಲಿದ್ದಾವೆ ಎಂಬುದಾಗಿ ತಿಳಿಸಿದೆ.
ಖಾಸಗಿ ಬಸ್ ಮಾಲೀಕರು ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದರೇ ದಂಡದ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಖಾಸಗಿ ಬಸ್ ರಹದಾರಿ ಸೇರಿದಂತೆ ಲೈಸೆನ್ಸ್ ಕೂಡ ರದ್ದುಪಡಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.
ಇನ್ನೂ ರಾಜ್ಯದ ಜನರು ಖಾಸಗಿ ಬಸ್ ಗಳು ದುಬಾರಿ ಪ್ರಯಾಣದರವನ್ನು ವಸೂಲಿ ಮಾಡುತ್ತಿದ್ದರೇ ಸಾರಿಗೆ ಇಲಾಖೆಯ ಸಹಾಯವಾಣಿ ಸಂಖ್ಯೆ 9449863429, 9449863426 ಗೆ ಕರೆ ಮಾಡಿ ದೂರು ನೀಡುವಂತೆ ಮನವಿ ಮಾಡಿದೆ.