ಶಿವಮೊಗ್ಗ: ಇಂದು ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಗ್ರಾಮದಲ್ಲಿ ಸೊರಬ ಪೊಲೀಸ್ ಠಾಣೆಯ ವತಿಯಿಂದ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯನ್ನು, ಸೊರಬ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಅವರು ನಡೆಸಿದರು.
ಈ ಸಭೆಗೆ ಸಿಪಿಐ ಬರಬೇಕಾಗಿತ್ತು. ತುರ್ತು ಕಾರ್ಯದ ನಿಮಿತ ಬೇರೆಡೆಗೆ ತೆರಳಿದ್ದರಿಂದ ಬರಲಾಗಲಿಲ್ಲ. ಹೀಗಾಗಿ ತಾವು ಆಗಮಿಸಿ, ಸಭೆ ನಡೆಸುತ್ತಿರುವುದಾಗಿ ಹೇಳಿದ ಅವರು, ಉಳವಿಯಲ್ಲಿ ವಾಹನಗಳ ಸಂಚಾರ ಸಮಸ್ಯೆ ಇದೆ. ವಾಹನಗಳ ನಿಲುಗಡೆಯ ಸಮಸ್ಯೆ ಆಗುತ್ತಿರುವುದು ಕಂಡು ಬಂದಿದೆ. ಆ ಎಲ್ಲಾ ಸಮಸ್ಯೆಯನ್ನು ಸ್ಥಳೀಯ ಆಡಳಿತದ ಜೊತೆಗೂಡಿ ಬಗೆ ಹರಿಸುವುದಾಗಿ ತಿಳಿಸಿದರು.
ರಸ್ತೆ ಬದಿಯಲ್ಲಿ ವಾಹನ ಸವಾರರು ನಿಲ್ಲಿಸಬಾರದು. ಸೂಕ್ತ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುವಂತೆ ಮನವಿಯನ್ನು ಮಾಡಿದರು.
ಗಾಂಜಾ ಬೆಳೆಯೋರ ಬಗ್ಗೆ ಮಾಹಿತಿ ಕೊಡಿ
ಉಳವಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಬೆಳೆಯುವ ಮಾಹಿತಿ ಇದ್ದರೇ ತಮ್ಮೊಂದಿಗೆ ಹಂಚಿಕೊಳ್ಳಿ. ಪೊಲೀಸ್ ಇಲಾಖೆಯು ಮಾಹಿತಿದಾರರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಗಂಜಾ ಬೆಳೆಯುವುದು ತಪ್ಪು, ಅಪರಾಧ ಕೂಡ. ಇಂತಹ ಗಾಂಜಾ ಬೆಳೆಯುವುದನ್ನು ತಪ್ಪಿಸಲು ಸಾರ್ವಜನಿಕರಾದಂತ ತಾವುಗಳೆಲ್ಲ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಕೋರಿದರು.
ಪೊಲೀಸ್ ಇಲಾಖೆಯ ಕುಂದುಕೊರತೆ ಸಭೆಯಲ್ಲಿ ಮಾತನಾಡಿದಂತ ಸಾರ್ವಜನಿಕರೊಬ್ಬರು, ಉಳವಿಯಲ್ಲಿ ಗೂಡ್ಸ್ ವಾಹನಗಳಿದ್ದಾವೆ. ನಮಗೆ ಪಾರ್ಕಿಂಗ್ ಸಮಸ್ಯೆ ಆಗುತ್ತಿದೆ. ಇಲಾಖೆಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಸೂಕ್ತ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ
ಈ ಅಹವಾಲಿಗೆ ಪಿಎಸ್ಐ ನಾಗರಾಜ್ ಅವರು, ಉಳವಿಯಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿ. ಸ್ಥಳೀಯ ಆಡಳಿತದಿಂದ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಲಿದೆ. ಪಾರ್ಕಿಂಗ್ ಇಲ್ಲವೆಂದು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಬಾರದು. ರಸ್ತೆ ಬದಿಯಲ್ಲಿ ಬಿಟ್ಟು ಸೂಕ್ತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು.
ವಾಹನ ಮಾಲೀಕರು ತಮ್ಮ ಬಳಿಯಲ್ಲಿ ಯಾವಾಗಲೂ ಸೂಕ್ತ ದಾಖಲೆಯನ್ನು ಇಟ್ಟುಕೊಳ್ಳಬೇಕು. ವಾಹನದ ಆರ್ ಸಿ, ಇನ್ಸೂರೆನ್ಸ್, ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಇವುಗಳು ಅವಧಿ ಮುಕ್ತಾಯವಾಗಿದ್ದರೇ ರಿನೀವಲ್ ಮಾಡಿಸಿಕೊಳ್ಳಬೇಕು. ಅಪಘಾತದಂತ ಸಂದರ್ಭದಲ್ಲಿ ಇವೆಲ್ಲವೂ ಮುಖ್ಯವಾಗಲಿದೆ. ಈ ಬಗ್ಗೆ ಎಚ್ಚರಿಕೆ. ನಾನು ಉಳವಿಯಲ್ಲಿ ವಾಹನಗಳ ತಪಾಸಣೆ ಮಾಡುತ್ತೇನೆ. ಈ ದಾಖಲೆಗಳಿಲ್ಲದೇ ಇದ್ದರೇ ಫೈನ್ ಕೂಡ ಹಾಕಲಾಗುತ್ತದೆ ಎಂಬುದಾಗಿ ಎಚ್ಚರಿಸಿದರು.
ಆನ್ ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ
ಇಂದು ಆನ್ ಲೈನ್ ವಂಚಕರು ತರಾವರಿ ರೀತಿಯಲ್ಲಿ ವಂಚಿಸುತ್ತಿದ್ದಾರೆ. ವಿವಿಧ ಆಮಿಷಗಳನ್ನು ವೊಡ್ಡಿ, ಹಣ ಸುಲಿಗೆ ಮಾಡೋದಕ್ಕೆ ಪ್ರಯತ್ನಿಸುತ್ತಾರೆ. ಅವರ ಯಾವುದೇ ಆಮಿಷಕ್ಕೆ ಒಳಗಾಗಬಾರದು. ನೀವು ಆಮಿಷಕ್ಕೆ ಒಳಗಾದ್ರೇ ನಿಮ್ಮ ಬ್ಯಾಂಕ್ ಖಾತೆಯ ಹಣವನ್ನೇ ಖಾಲಿ ಮಾಡ್ತಾರೆ. ಆಮೇಲೆ ನಿಮ್ಮ ಹಣ ವಾಪಾಸ್ ಬರೋದಿಲ್ಲ. ಯಾವುದೇ ಲಿಂಕ್ ಬಂದ್ರೆ ಕ್ಲಿಕ್ ಮಾಡಿ, ಅವರು ಹೇಳುವಂತೆ ಮಾಡೋದಕ್ಕೆ ಹೋಗಬೇಡಿ. ಕರೆ ಬಂದ್ರೆ ಉತ್ತರಿಸಬೇಡಿ. ಜಾಗ್ರತೆಯಾಗಿರಿ ಎಂಬುದಾಗಿ ತಿಳಿಹೇಳಿದರು.
ಕೈಸೋಡಿ ಸರ್ಕಲ್ ನಲ್ಲಿ ಸಿಸಿಟಿವಿ ಅಳವಡಿಸಲು ಒತ್ತಾಯ
ಇಂದಿನ ಪೊಲೀಸ್ ಇಲಾಖೆಯ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಉಳವಿಯ ಕೈಸೋಡಿ ಸರ್ಕಲ್ ನಲ್ಲಿ ಹೆಚ್ಚು ಜನ ಸಂದಣೆ ಉಂಟಾಗುತ್ತದೆ. ಆಗಾಗ ಗಲಾಟೆಗಳು ಆಗುತ್ತವೆ. ವಾಹನಗಳ ನಿಲುಗಡೆ ಕೂಡ ಹೆಚ್ಚು ಇರುತ್ತದೆ. ಸಂಚಾರ ದಟ್ಟಣೆ ಸಮಸ್ಯೆ ಕೂಡ ಆಗುತ್ತಿರುತ್ತದೆ. ಇವುಗಳನ್ನೆಲ್ಲ ತಡೆಗಟ್ಟಲು ಸಿಸಿಟಿವಿಯನ್ನು ಅಳವಡಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದಂತ ಸೊರಬ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಅವರು, ಈಗಾಗಲೇ ಈ ಸಂಬಂಧ ಉಳವಿ ಗ್ರಾಮ ಪಂಚಾಯ್ತಿಗೆ ಪೊಲೀಸ್ ಇಲಾಖೆಯಿಂದ ಪತ್ರ ಬರೆದು ಕೋರಲಾಗಿದೆ. ಅನುದಾನದ ಕೊರತೆಯಿಂದ ಸಿಸಿಟಿವಿ ಅಳವಡಿಸಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಈ ಬಗ್ಗೆ ಉಳವಿ ಗ್ರಾಮ ಪಂಚಾಯ್ತಿ ಅಧಿಕಾರಿ, ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗಣಪತಿ ಮೈಸಾವಿ, ಪ್ರಶಾಂತ್ ಕೈಸೋಡಿ, ಹೊಳೆಯಪ್ಪ ದೂಗೂರು, ಹಜಮತ್, ಪೊಲೀಸ್ ಪೇದೆಗಳಾದಂತ ರಾಘವೇಂದ್ರ, ವಿನಯ್, ಮೋಹನ್ ಸೇರಿದಂತೆ ಇತರರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ
BIG NEWS: 50 ಪೈಸೆ ಹಿಂದಿರುಗಿಸದ ಅಂಚೆ ಇಲಾಖೆಗೆ 15,000 ದಂಡ ವಿಧಿಸಿದ ‘ಗ್ರಾಹಕ ಆಯೋಗ’