ಮುಂಬೈ : ಜೂಜಾಟದ ಜಾಹಿರಾತು ಒಂದರಲ್ಲಿ ಮುಂಬೈ ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕ್ ವಿರುದ್ಧ ಹಿಂದೂ ಪರ ಸಂಘಟನೆ ದೂರು ನೀಡಿದೆ.
ಹೌದು ನವಾಜುದ್ಧೀನ್ ಸಿದ್ಧಿಕಿ ಬಿಗ್ ಕ್ಯಾಶ್ ಹೆಸರಿನ ಗೇಮಿಂಗ್ ಅಪ್ಲಿಕೇಶನ್ ಒಂದರ ರಾಯಭಾರಿ ಆಗಿದ್ದು, ಈ ಗೇಮಿಂಗ್ ಅಪ್ಲಿಕೇಶನ್ನ ಜಾಹೀರಾತುಗಳಲ್ಲಿ ನವಾಜುದ್ಧೀನ್ ಸಿದ್ಧಿಕಿ ನಟಿಸಿದ್ದಾರೆ. ನವಾಜುದ್ಧೀನ್ ಸಿದ್ಧಿಕಿ, ಮುಂಬೈ ಪೊಲೀಸರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿರುವ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುಂಬೈ ಪೊಲೀಸ್ ಆಯುಕ್ತರಿಗೆ ನವಾಜುದ್ಧೀನ್ ಸಿದ್ಧಿಕಿ ವಿರುದ್ಧ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪೊಲೀಸ್ ಸಮವಸ್ತ್ರ ಧರಿಸಿ, ಕ್ರೈಂ ವಿಭಾಗದಲ್ಲಿ ದೊಡ್ಡ ಹೆಸರು ಮಾಡಬೇಕೆಂದರೆ ದೊಡ್ಡ ಕೆಲಸ ಮಾಡಬೇಕಾಗುತ್ತದೆ. ಈ ಅಪರಾಧಿಗಳು ನನ್ನನ್ನು ಸಾಮಾನ್ಯ ಅಂದುಕೊಂಡು ಬಿಟ್ಟಿದ್ದಾರೆ. ಅವರ ಹಾವ ಭಾವದಿಂದಲೇ ಅವರ ಆಟ ಎಂಥಹದ್ದು ನಾನು ಕಂಡು ಹಿಡಿದುಬಿಡುತ್ತೇನೆ. ಏಕೆಂದರೆ ಆ ಆಟವನ್ನು ನಾನು ಐದು ಕೋಟಿ ಜನರೊಟ್ಟಿಗೆ ಪ್ರತಿ ದಿನವೂ ಆಡುತ್ತೇನೆ’ ಎಂದು ಸಂಭಾಷಣೆ ಹೇಳುವ ನವಾಜುದ್ಧೀನ್ ಸಿದ್ಧಿಕಿ, ಬಿಗ್ ಕ್ಯಾಶ್ನಲ್ಲಿ ನೀವೂ ಆಟವಾಡಿ ಹಣ ಗಳಿಸಿ ಎಂದು ಹೇಳುತ್ತಾರೆ.
ಜೂಜಾಟವನ್ನು ಪ್ರಚಾರ ಮಾಡುವ ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಪೊಲೀಸ್ ಸಮವಸ್ತ್ರ ಧರಿಸಿರುವುದಕ್ಕೆ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಮುಂಬೈ ಪೊಲೀಸ್ ಆಯುಕ್ತರಿಗೆ ಹಾಗೂ ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಮುಖೇನ ದೂರು ನೀಡಿದ್ದಾರೆ. ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಮುಂಬೈ ಪೊಲೀಸರ ಸಮವಸ್ತ್ರ ಧರಿಸಿದ್ದು, ಈ ಜಾಹೀರಾತು ಮುಂಬೈ ಪೊಲೀಸರ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.