ಬೆಂಗಳೂರು : ಮೈತ್ರಿ ಪಕ್ಷಗಳಿಗೆ ಬಿಗ್ ಶಾಕ್ ಕೊಟ್ಟ ಸಿಪಿ ಯೋಗೇಶ್ವರ್ ಅವರು ಬಿಜೆಪಿ ಪಕ್ಷವನ್ನು ತೊರೆದು ಅಧಿಕೃತವಾಗಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ಗೆ ಸಿಪಿ ಯೋಗೇಶ್ವರ್ ಸೆಡ್ಡು ಹೊಡೆದಿದ್ದಾರೆ. ಇನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಕಾದು ನೋಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತಮಾಡಿದ ಅವರು, ಚನ್ನಪಟ್ಟಣದ ಅಭ್ಯರ್ಥಿ ಬಗ್ಗೆ ಪ್ರತಿಕ್ರಿಸಿ, ಯಾರು ಅಂತ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಎನ್ಡಿಎ ಕೂಟದಿಂದಲೇ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು. ಅನಸೂಯ ಮಂಜುನಾಥ್ ಅಭ್ಯರ್ಥಿ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಕಾದು ನೋಡಿ ಎಂದಷ್ಟೇ ಹೇಳಿದರು.
ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವನ್ನೇನು ತಂದಿಲ್ಲ. ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗಲೇ ನಿರೀಕ್ಷೆ ಇತ್ತು. ಹಾಗಾಗಿ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಮೈತ್ರಿ ಪಕ್ಷಗಳಿಗೆ ಯಾವುದೇ ನಷ್ಟವಿಲ್ಲ ಇದರಲ್ಲಿ ಆಶ್ಚರ್ಯ ಪಡುವಂಥದ್ದು ಇಲ್ಲ ಎಂದು ಸ್ಪಷ್ಟಪಡಿಸಿದರು.