ಬೆಂಗಳೂರು: ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ 03 ಕ್ಷೇತ್ರಗಳಾದ 83-ಶಿಗ್ಗಾಂವ್, 95-ಸಂಡೂರು ಹಾಗೂ 185-ಚನ್ನಪಟ್ಟಣ ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪ ಚುನಾವಣೆಯನ್ನು ಘೋಷಿಸಿದ್ದು, ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲಾ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಿಸಲಾಗಿದೆ.
ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1963ರ ಕರ್ನಾಟಕ ಔದ್ಯೋಗಿಕ ಸಂಸ್ಥೆಗಳ (ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳು) ಕಾಯ್ದೆಯ ಕಲಂ 3-ಎ ಹಾಗೂ 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಕಲಂ.135(ಬಿ) ರಡಿಯಲ್ಲಿ ವೇತನ ಸಹಿತ ರಜೆ ಘೋಷಿಸಿ, ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಸಂಸ್ಥೆಗಳು / ನಿಯೋಜಕರು ಅನುವು ಮಾಡಿ ಕೊಡಬೇಕಾಗಿರುತ್ತದೆ. ಆದ್ದರಿಂದ ಚುನಾವಣೆಯ ನಡೆಯುವ ಕ್ಷೇತ್ರಗಳಲ್ಲಿ ಮತ ಚಲಾಯಿಸುವ ಅರ್ಹ ಕಾರ್ಮಿಕರು ಮತದಾನ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳ ಮಾಲೀಕರು ವೇತನ ಸಹಿತ ರಜೆ ನೀಡುವಂತೆ ಆದೇಶಿಸಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆ/ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಾರ್ಮಿಕ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.