ಕಲಬುರ್ಗಿ : ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮಹಿಳೆಗೆ ನಿನ್ನ ಪತಿಯನ್ನು ಬಿಟ್ಟು ಬರುವಂತೆ ತಿಳಿಸಿದ್ದಾನೆ. ಇದಕ್ಕೆ ಒಪ್ಪದ ಆಕೆಗೆ ನಿರಂತರವಾಗಿ ಕಿರುಕುಳ ನೀಡಿದ್ದಾನೆ ಇದಕ್ಕೆ ಮನನೊಂದು ಮಹಿಳೆ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ನಗರದ ರಾಮತೀರ್ಥ ಬಡಾವಣೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಬಾಲೂರ ಮೂಲದ ವೈಷ್ಣವಿ ಮಾರುತಿ (24) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎನ್ನಲಾಗಿದೆ.ವೈಷವಿ ಕಲಬುರಗಿ ನಗರದ ರಾಮತೀರ್ಥ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗುತ್ತಿದೆ. ಇನ್ನು ಕಿರುಕುಳ ನೀಡಿದ ಕಮಲನಗರದ ವಿಷ್ಣು ಅಂಕುಶ ವಗ್ದರೆ ವಿರುದ್ಧ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಷ್ಣವಿ ಬೀದರ್ ನಲ್ಲಿ ವಾಸಿಸುತ್ತಿದ್ದಾಗ ಅವರ ಮನೆಯಲ್ಲಿ ಸಂಬಂಧಿಕರ ಮಗಳೊಬ್ಬರು ಓದುತ್ತಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಷ್ಣು ವೈಷ್ಣವಿಗೆ ಪರಿಚಯವಾಗಿದ್ದಾನೆ.ಈ ವೇಳೆ ಸಂಬಂಧಿಕರ ಮಗಳ ನಡತೆ ಸರಿ ಇಲ್ಲ ಈ ಕುರಿತು ಪೋಷಕರಿಗೆ ತಿಳಿಸುತ್ತೇನೆ ಎಂದು ವೈಷ್ಣವಿಗೆ ಬೆದರಿಕೆ ಹಾಕಿದ್ದಾನೆ. ವೈಷ್ಣವಿ ಹೆದರಿಕೊಂಡು ಅವಳ ಪೋಷಕರಿಗೆ ತಿಳಿಸಬೇಡ ಎಂದು ಮನವಿ ಮಾಡಿದ್ದಾಳೆ.
ಅವರಿಗೆ ಹೇಳಬಾರದೆಂದರೆ ನನ್ನೊಂದಿಗೆ ಮೆಸೇಜ್ ಮಾಡು ಎಂದು ಹೇಳಿದಾಗ ದಾರಿ ತೋಚದೆವೈಷ್ಣವಿ ಅವನೊಂದಿಗೆ ಮೆಸೇಜ್ ಮಾಡಿದ್ದಾಳೆ. ಇದೇ ನೆಪದಲ್ಲಿ ವಿಷ್ಣು ಅವಳನ್ನು ಭೇಟಿಯಾಗಿದ್ದಾಗ ಗಂಡನನ್ನು ಬಿಟ್ಟು ಎಂದು ಕಿರುಕುಳ ನೀಡಿದ್ದಾನೆ. ಮನನೊಂದ ವೈಷ್ಣವಿ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಸೂಸೈಡ್ ಗು ಮುಂಚೆ ಆತನಿಗೆ ಗಲ್ಲು ಶಿಕ್ಷೆ ನೀಡಿ ಎಂದು ಬರೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.