ಬೆಂಗಳೂರು: ಸಿ.ಪಿ.ಯೋಗೇಶ್ವರ್ ಅವರು ಮೇಲೆ ಇದ್ದಾರೆ. ಅವರ ಬಗ್ಗೆ ನಾನೇನು ಚರ್ಚೆ ಮಾಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಚಿಹ್ನೆ ಅಡಿ ನಿಲ್ಲಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.
ಸಚಿವರು ಭಾನುವಾರ ಸಂಜೆ ಮಂಡ್ಯ ಜಿಲ್ಲೆಯಿಂದ ಮರಳಿದ ನಂತರ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಅವರು ಮೇಲಿದ್ದಾರೆ, ದೊಡ್ಡವರು. ಅವರ ಬಗ್ಗೆ ನಾನೇನು ಚರ್ಚೆ ಮಾಡಲಿ? ಅವರು ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಅವರು ಕಾಂಗ್ರೆಸ್ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಪಕ್ಷಗಳ ಮುಖಂಡರ ಜತೆಯು ಸಂಪರ್ಕದಲ್ಲಿದ್ದಾರೆ ಎಂದು ಹೊರಗಡೆ ಚರ್ಚೆ ನಡೆಯುತ್ತಿದೆ. ಪಕ್ಕದ ಮದ್ದೂರು ಕ್ಷೇತ್ರದ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಚರ್ಚೆ ನಡೆಯುತ್ತಿದೆ. ಎಲ್ಲವನ್ನೂ ಬಿಜೆಪಿ ವರಿಷ್ಠ ನಾಯಕರು ಗಮನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇನ್ನೂ ನಿರ್ಧಾರ ಮಾಡಿಲ್ಲ
ಈಗ ಚನ್ನಪಟ್ಟಣ ವಿಚಾರವಾಗಿ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ವರಿಷ್ಠ ನಾಯಕರೇ ಹಲವು ಬಾರಿ ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಸ್ಪರ್ಧಿಸಿರುವ ಕ್ಷೇತ್ರ ಎನ್ನುವುದು ಅವರಿಗೆ ಗೊತ್ತಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚನ್ನಪಟ್ಟಣದಲ್ಲಿ ನಾವು ಘೋಷಣೆ ಮಾಡುತ್ತೇವೆ. ಚನ್ನಪಟ್ಟಣ ವಿಚಾರದಲ್ಲಿ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ ಎಂದರು ಅವರು.
ನನ್ನ ವರ್ಚಸ್ಸು ಕುಗ್ಗಿಸುವ ಹುನ್ನಾರ
ಕಾಂಗ್ರೆಸ್ ನಾಯಕರಲ್ಲಿ ಏನಾದರೂ ಮಾಡಿ ಕುಮಾರಸ್ವಾಮಿ ವರ್ಚಸ್ಸು ಕುಗ್ಗಿಸಬೇಕು ಅನ್ನುವುದು ಕೆಲವರ ಉದ್ದೇಶ. ನಾನು ಎಲ್ಲಾ ಬಿಜೆಪಿ ನಾಯಕರ ಬಗ್ಗೆ ಹೀಗೆ ಹೇಳುತ್ತಿಲ್ಲ. ಕೆಲವರಿಗೆ ಈ ಮೈತ್ರಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಅವರು ದೂರಿದರು.
ಮೈತ್ರಿಯನ್ನು ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿರಬಹುದು. ನನ್ನ ಗಮನಕ್ಕೂ ಹಲವಾರು ವಿಚಾರಗಳು ಬರುತ್ತಿವೆ. ಯೋಗೇಶ್ವರ್ ಅವರು ಉಪ ಮುಖ್ಯಮಂತ್ರಿಯನ್ನು ಈಗಾಗಲೇ ಎರಡು ಬಾರಿ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಏತಕ್ಕೆ ಭೇಟಿ ಮಾಡಿದ್ದರು ಎಂಬುದು ನನಗೆ ಬೇಕಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಸಚಿವರು ಬಿಚ್ಚಿಟ್ಟರು.
Rain Alert : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ : ಈ 13 ಜಿಲ್ಲೆಗಳಲ್ಲಿ ‘ಯಲ್ಲೋ’ ಅಲರ್ಟ್ ಘೋಷಣೆ
BREAKING : ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ಗೆ ಬಾಂಬ್ ಬೆದರಿಕೆ ಕರೆ : ಭದ್ರತಾ ಪಡೆಗಳಿಂದ ಮುಂಜಾಗ್ರತಾ ಕ್ರಮ