ಮಂಡ್ಯ: ಎರಡು ದಿನಗಳ ಕಾಲ ನಗರದಲ್ಲಿ ನಡೆದ ಮಂಡ್ಯ ಟೂ ಇಂಡಿಯಾ ಬೃಹತ್ ಉದ್ಯೋಗ ಮೇಳದಲ್ಲಿ 6150 ಅರ್ಜಿಗಳು ಬಂದಿದ್ದು, ಆ ಪೈಕಿ 1,122 ಅಭ್ಯರ್ಥಿಗಳಿಗೆ ನೇರ ನೇಮಕಾತಿ ಪತ್ರ ನೀಡಲಾಗಿದೆ ಇಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಉದ್ಯೋಗ ಮೇಳದ ನಂತರ ಈ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವರು; ಉಳಿದ ಅಭ್ಯರ್ಥಿಗಳಿಗೆ ಡಿಸೆಂಬರ್ ತಿಂಗಳ ಒಳಗಾಗಿ ಉದ್ಯೋಗ ಕೊಡಿಸಲಾಗುವುದು. ಅದಕ್ಕಾಗಿ ಮಂಡ್ಯದ ಸಂಸದರ ಕಚೇರಿಯಲ್ಲಿ ಸುಸಜ್ಜಿತ ವಾರ್ ರೂಮ್ ತೆರೆಯಲಾಗುವುದು ಹಾಗೂ ದೆಹಲಿಯ ನನ್ನ ಸಚಿವಾಲಯದಲ್ಲಿ ವಿಶೇಷ ಸೆಲ್ ತೆರೆಯಲಾಗುವುದು. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.
ಮಂಡ್ಯದಲ್ಲಿ ಸಮರೋಪವಾದ ಮಂಡ್ಯ ಟೂ ಇಂಡಿಯಾ ಬೃಹತ್ ಉದ್ಯೋಗ ಮೇಳ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಆಗಿದೆ. ನನಗೆ ಬಹಳ ಸಂತೋಷವಾಗಿದ್ದು, ನನ್ನ ಕ್ಷೇತ್ರದ, ರಾಜ್ಯದ ವಿವಿಧ ಜಿಲ್ಲೆಗಳ ರೈತಾಪಿ ಜನರ ಮಕ್ಕಳಿಗೆ ಉದ್ಯೋಗ ಸಿಕ್ಕಿದೆ ಎನ್ನುವ ಆತ್ಮತೃಪ್ತಿ ನನಗೆ ದೊರೆತಿದೆ ಎಂದು ಅವರು ಹೇಳಿದರು.
ಉದ್ಯೋಗ ಮಕ್ಕಳಿಗೆ, ಆ ಸಂತೋಷ ಅವರ ಪೋಷಕರಿಗೆ. ಇಂಥ ಒಂದು ಒಳ್ಳೆಯ ಕೆಲಸ ಮಾಡಿದ್ದೇನೆ ಎನ್ನುವ ಸಾರ್ಥಕ ಭಾವನೆ ನನ್ನದು. ಉದ್ಯೋಗ ಮೇಳದ ಯಶಸ್ಸು ನನಗೆ ಇನ್ನಷ್ಟು ಉತ್ತೇಜನ ನೀಡಿದೆ. ಜಿಲ್ಲೆಯ ಯಾವ ಮಕ್ಕಳು ಉದ್ಯೋಗಕ್ಕಾಗಿ ಅಳೆಯುವಂತ ಪರಿಸ್ಥಿತಿ ಬರಬಾರದು ಎಂದರು ಸಚಿವರು.
ಇದು ಆರಂಭ, ಮುಕ್ತಾಯ ಅಲ್ಲ
ಇದು ಆರಂಭ, ಮುಕ್ತಾಯ ಅಲ್ಲ. ಇಂಥ ಉದ್ಯೋಗ ಮೇಳಗಳು ಮುಂದೆ ನಿರಂತರವಾಗಿ ನಡೆಯುತ್ತವೆ. ಈವರೆಗೆ ನನಗೆ ನನ್ನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ; ಎರಡು ದಿನಗಳ ಉದ್ಯೋಗ ಮೇಳದಲ್ಲಿ ಸುಮಾರು 6150ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕಾರ ಮಾಡಿದ್ದೇವೆ. ಈ ಪೈಕಿ 1,122 ಮಂದಿಗೆ ಖಚಿತವಾಗಿ ಉದ್ಯೋಗ ಸಿಕ್ಕಿದೆ. ನೇಮಕಾತಿ ಪತ್ರಗಳು ವಿತರಣೆಯಾಗಿವೆ ಎಂದು ಸಚಿವರು ಮಾಹಿತಿ ನೀಡಿದರು.
ಡಿಸೆಂಬರ್ ಒಳಗೆ ಎಲ್ಲರಿಗೂ ಉದ್ಯೋಗ
ಬರುವ ದಿನಗಳಲ್ಲಿ ಉಳಿದ ಅರ್ಜಿಗಳನ್ನು ನಾವು ಫಾಲೋ ಅಪ್ ಮಾಡುತ್ತೇವೆ. ಅವರೆಲ್ಲರಿಗೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇವೆ. ಈ ಪ್ರಕ್ರಿಯೆ ಇಲ್ಲಿಗೇ, ಇವತ್ತಿಗೆ ನಿಲ್ಲುವುದಿಲ್ಲ. ಡಿಸೆಂಬರ್ ತಿಂಗಳವರೆಗೂ ಚಾಲ್ತಿಯಲ್ಲಿ ಇರಬೇಕು ಎಂದು ನಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ನಾನು ಮೊದಲೇ ಹೇಳಿದಂತೆ ಇದು ಶುಭಾರಂಭ ಅಷ್ಟೇ, ನಿರಂತರವಾಗಿ ಮುಂದುವರಿಯುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಧನ್ಯವಾದ ಹೇಳಿದ ಸಚಿವರು
ವಿಶೇಷವಾಗಿ ಈ ಉದ್ಯೋಗ ಮೇಳ ಯಶಸ್ಸು ಆಗಲಿಕ್ಕೆ ಬಹಳ ಜನರು ಕಾರಣರಾಗಿದ್ದಾರೆ. ವಿಶೇಷವಾಗಿ ಎನ್ ಸಿಸಿ ಮಕ್ಕಳಿಗೆ ಧನ್ಯವಾದ ಅರ್ಪಿಸುತ್ತೇನೆ. ಪೊಲೀಸರು ನಮ್ಮ ರೈತಾಪಿ ಮಕ್ಕಳಿಗೆ ಕೆಲಸ ಸಿಗಲಿ ಎನ್ನುವ ಪ್ರೀತಿಯಿಂದ ಉತ್ತವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜಿಲ್ಲಾಡಳಿತದ ಸಹಕಾರಕ್ಕೆ ನಾನು ಆಭಾರಿ ಆಗಿದ್ದೇನೆ. ಜಿಲ್ಲಾಧಿಕಾರಿಗಳು, ಎಸ್ ಪಿ ಅವರು, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅವರೆಲ್ಲ ತಂಡಗಳ ಅಧಿಕಾರಿಗಳು ನಮದೇ ಕಾರ್ಯಕ್ರಮ ಎಂದು ನಡೆಸಿಕೊಟ್ಟಿದ್ದಾರೆ. ಎಲ್ಲರಿಗೂ ನಾನು ಅಬಿವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಆಕರ್ಷಕ ಪ್ಯಾಕೇಜ್
ಅನೇಕ ಯುವ ಜನರಿಗೆ ಒಳ್ಳೆಯ ಕಂಪನಿಗಳಿಂದ ಆಕರ್ಷಕ ವೇತನದ ಪ್ಯಾಕೆಜ್ ಸಿಕ್ಕಿದೆ. ಒಬ್ಬರಿಗೆ ಹುಂಡೈ ಕಂಪನಿಯಿಂದ ವರ್ಷಕ್ಕೆ 8 ಲಕ್ಷ ರೂಪಾಯಿ ಪ್ಯಾಕೆಜ್ ಸಿಕ್ಕಿದೆ. ಮರ್ಸಿಡಿಸ್ ಬೆಂಜ್ ಕಂಪನಿಯಿಂದ ಇನ್ನೂ ಹಲವರಿಗೆ ವಾರ್ಷಿಕ 6 ಲಕ್ಷ ರೂಪಾಯಿ ಪ್ಯಾಕೆಜ್ ಸಿಕ್ಕಿದೆ. ಸಾಕಷ್ಟು ಮಾಹಿತಿ ನನಗೆ ಇನ್ನು ಬರಬೇಕಿದೆ. ಪೂರ್ಣ ಮಾಹಿತಿ ಬಂದ ನಂತರ ಎಲ್ಲಾ ಅಂಕಿ ಸಂಖ್ಯೆ ಸೇರಿಸಿ ಮಾಧ್ಯಮ ಪ್ರಕಟಣೆ ಹೊರಡಿಸುತ್ತೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉದ್ಯೋಗ ಸಿಕ್ಕಿರುವ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದ ಸಚಿವರು; ಎಲ್ಲಿಯೇ ಅವಕಾಶ ಸಿಕ್ಕಿದರೂ ಹೋಗಿ. ದೇಶ ಸುತ್ತಿ, ಕೋಶ ಓದಿ ಎನ್ನುವ ಮಾತಿದೆ. ಹೊರಗೆ ಹೋದರೆ ಪ್ರಪಂಚ ಗೊತ್ತಾಗುತ್ತದೆ. ಯಾವುದೇ ರಾಜ್ಯದಲ್ಲಿ ಉದ್ಯೋಗ ಸಿಕ್ಕಿದರೂ ಹೋಗಿ ಸೇರಿಕೊಳ್ಳಿ. ಕರ್ನಾಟಕದಲ್ಲಿಯೇ ಉದ್ಯೋಗ ಸಿಗಬೇಕು ಎಂದು ಅಂದುಕೊಳ್ಳಬೇಡಿ, ದೇಶದಲ್ಲಿ ಎಲ್ಲಿಯೇ ಕೆಲಸ ಸಿಕ್ಕಿದರೂ ಹೋಗಿ ಎಂದರು.
ಶಿರೂರು ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಜನಾರ್ಧನ ನಾಯಕ್ ಅವರ ಪುತ್ರಿಗೆ ಉದ್ಯೋಗ
ಶಿರೂರು ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಜನಾರ್ಧನ ನಾಯಕ್ ಅವರ ಪುತ್ರಿ ಕೃತ್ತಿಕಾ ಜೆ.ನಾಯ್ಕ ಅವರಿಗೆ ಅವರಿಗೆ ಕೇಂದ್ರ ಸರಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ಕಂಪನಿಯಲ್ಲಿ ಉದ್ಯೋಗ ದೊರೆತಿದ್ದು, ಅವರಿಗೆ ಸಚಿವರು ನೇಮಕಾತಿ ಪತ್ರ ನೀಡಿದರು.
ಖಾಸಗಿ ರಂಗದ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಕಂಪನಿಯಲ್ಲಿ ಉದ್ಯೋಗ ಪಡೆದ ಅವಳಿ ಜವಳಿ ಯುವತಿಯರಾದ ನವ್ಯಾ ಮತ್ತು ನಂದಿತಾ ಅವರಿಗೆ ಕೇಂದ್ರ ಸಚಿವರು ನೇಮಕಾತಿ ಆದೇಶ ಪತ್ರ ವಿತರಿಸಿದರು.
ಅಲೋರಿಕಾ ಗ್ಲೋಬಲ್ ಬಿಪಿಒ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡ ವಿಷೇಶಚೇತನ ಯುವಕ ಅಜಯ್ ಕುಮಾರ್ ಅವರಿಗೆ ಸಚಿವರು ಶುಭ ಹಾರೈಸಿದರು. ಈಗಾಗಲೇ ಕಂಪನಿಯ ಈ ಮೇಲ್ ನಿಂದ ಅವರಿಗೆ ನೇರ ನೇಮಕಾತಿ ಆದೇಶ ಪತ್ರ ರವಾನೆಯಾಗಿದೆ.
ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣ: ಗೃಹ ಸಚಿವ ಡಾ.ಜಿ ಪರಮೇಶ್ವರ್
ಭಂಡತನ, ಹುಡುಗಾಟಿಕೆ ಬಿಡಿ, ರಾಜೀನಾಮೆ ಕೊಡಿ: ಸಿಎಂಗೆ ಬಿ.ವೈ.ವಿಜಯೇಂದ್ರ ಒತ್ತಾಯ