ಬೆಂಗಳೂರು : ತಳ ಸಮುದಾಯಗಳಿಗೆ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಪ್ರತೀ ಹೋಬಳಿಗೂ ಒಂದು ವಸತಿ ಶಾಲೆ ಮಾಡಿಯೇ ಮಾಡುತ್ತೇನೆ. SCS/TSP ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಆಯವ್ಯಯದಲ್ಲಿ ಮೊದಲಿಗೆ ಮೀಸಲಿಟ್ಟಿದ್ದು ನಮ್ಮ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ವಾಲ್ಮೀಕಿ ಗುರುಗಳು ಕಲಿತರು ರಾಮಾಯಣ ಬರೆದರು.ವಾಲ್ಮೀಕಿ ಗುರುಗಳು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ. ರಾಮನ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿಗಳು ಎಂದು ತಿಳಿಸಿದರು.
ನಮ್ಮ ಸರ್ಕಾರ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಇದನ್ನು ವಿರೋಧಿಸಿದವರು ಬಿಜೆಪಿಯವರು. ಆದ್ದರಿಂದ ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಬಿಜೆಪಿ ಸುಳ್ಳುಗಳಿಗೆ ಸರಿಯಾದ ಉತ್ತರ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಾಗಲೀ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಬರೀ ಬಾಯಿ ಮಾತಲ್ಲಿ ಸಮಾನತೆ ಬರಲ್ಲ. ಆರ್ಥಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಹೋಗದ ಹೊರತು ಸಮಾನತೆ ಬರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ.