ದಕ್ಷಿಣ ಕನ್ನಡ: ರಾಜ್ಯದಲ್ಲಿ ಯಾರು ಬಾಂಬ್, ಬೆಂಕಿ ಹಾಕ್ತಾರೋ ದೇಶಪ್ರೇಮಿಗಳು. ಪಾಕಿಸ್ತಾನ್ ಜಿಂದಾಬಾದ್ ಅಂದವರು ದೇಶಪ್ರೇಮಿಗಳು, ಭಾರತ್ ಮಾತಕೀ ಜೈ ಎಂದವರು ದೇಶದ್ರೋಹಿಗಳು ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾಧಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಇಂದು ವಿಧಾನಪರಿಷತ್ ಉಪ ಚುನಾವಣೆ ಸಂಬಂಧ ನಡೆದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶದ ಸಂದರ್ಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೇಶಪ್ರೇಮಿಗಳು; ಭಾರತ್ ಮಾತಾಕಿ ಜೈ ಎನ್ನುವವರು ದೇಶದ್ರೋಹಿಗಳು ಎಂಬ ಸ್ಥಿತಿ ಇದೆ. ಯಾರು ಬಾಂಬ್ ಹಾಕುತ್ತಾರೋ, ಬೆಂಕಿ ಹಾಕುತ್ತಾರೋ, ಕಾನೂನು ಕೈಗೆ ತೆಗೆದುಕೊಳ್ಳುವವರು ದೇಶಪ್ರೇಮಿಗಳು ಎಂಬಂತಾಗಿದೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತುಷ್ಟೀಕರಣ ನೀತಿ ತುತ್ತತುದಿಗೆ ಮುಟ್ಟಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಇಂಥ ಆಡಳಿತದ ವಿರುದ್ಧ ಸೆಟೆದು ನಿಲ್ಲಬೇಕಿದೆ ಎಂದು ತಿಳಿಸಿದರು.
ಸಂಸದ ಬ್ರಿಜೇಶ್ ಚೌಟ ಅವರು ಮಾತನಾಡಿ, ಇದು ಕಾರ್ಯಕರ್ತರಿಗೆ ಹುಮ್ಮಸ್ಸು ಮತ್ತು ಪ್ರೇರಣೆ ಕೊಡುವ ಚುನಾವಣೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಉಪ ಚುನಾವಣೆ ನಡೆಯಲಿದೆ. ಕಿಶೋರ್ ಕುಮಾರ್ ಪುತ್ತೂರು ಅವರನ್ನು ಗೆಲ್ಲಿಸಿ ಕಳುಹಿಸೋಣ ಎಂದು ಮನವಿ ಮಾಡಿದರು.
ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನ, ಜವಾಬ್ದಾರಿ ಕೊಡುವ ಕೆಲಸವನ್ನು ನಮ್ಮ ಕೇಂದ್ರ- ರಾಜ್ಯ ಸರಕಾರಗಳು ಮಾಡಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯಿತಿಯಿಂದ ಬಂದು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನುಭವ ಇದ್ದವರು. ಬಳಿಕ ವಿಧಾನಪರಿಷತ್ತಿನಲ್ಲಿ ಕೆಲಸ ಮಾಡಿದ್ದು, ಅವರು ಅದ್ಭುತವಾದ ಗ್ರಾಮ ಚಿಂತನೆ ಹೊಂದಿದವರು ಎಂದು ವಿವರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಕು. ಭಾಗೀರಥಿ ಮುರಳ್ಯ, ವಿಧಾನಪರಿಷತ್ ಉಪಚುನಾವಣೆಯ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ನಿಕಟಪೂರ್ವ ವಿಭಾಗ ಪ್ರಭಾರಿ ಉದಯ್‍ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
BIG NEWS: ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರ: ಛಲವಾದಿ ನಾರಾಯಣಸ್ವಾಮಿಯಿಂದ ಪ್ರಧಾನಿ, ರಾಷ್ಟ್ರಪತಿಗೆ ಪತ್ರ
BIG BREAKING: ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು