ಬೆಂಗಳೂರು: ಬೆಂಗಳೂರು ನಗರದ ಪ್ರತಿ ಮನೆಗೂ ಕಾವೇರಿ ನೀರು ಕಲ್ಪಿಸುವ ನಮ್ಮ ಸಂಕಲ್ಪದ ಈಡೇರಿಕೆಗೀಗ ಕ್ಷಣಗಣನೆ ಆರಂಭಗೊಂಡಿದೆ. ಕಾವೇರಿ ಐದನೇ ಹಂತದ ಯೋಜನೆಯ ಮೂಲಕ ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳ 50 ಲಕ್ಷ ಫಲಾನುಭವಿಗಳಿಗೆ ನಾಳೆಯಿಂದ ಕಾವೇರಿ ನೀರು ಲಭ್ಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ₹4,336 ಕೋಟಿ ವೆಚ್ಚದ ಈ ಬೃಹತ್ ಯೋಜನೆ ಬೆಂಗಳೂರಿಗರ ಬದುಕಿಗೆ ನೆಮ್ಮದಿ ಒದಗಿಸುವುದು ನಿಶ್ಚಿತ. ಬೆಂಗಳೂರು ನಗರದ 110 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ₹4,336 ಕೋಟಿ ವೆಚ್ಚದ ಕಾವೇರಿ ಐದನೇ ಹಂತದ ನೀರು ಸರಬರಾಜು ಯೋಜನೆ ನಾಳೆ ಉದ್ಘಾಟನೆಯಾಗಲಿದೆ.
ಸುಮಾರು 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಲಾದ ಈ ಯೋಜನೆಯು ನಮ್ಮ ಸರ್ಕಾರದ ಬದ್ಧತೆ ಮತ್ತು ಕಾರ್ಯದಕ್ಷತೆಯಿಂದಾಗಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ನಾಳೆ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ಕೋರಿದ್ದಾರೆ.