ವಿಜಯನಗರ : ಇತ್ತೀಚಿಗೆ ಯುವ ಜನತೆ ಮೊಬೈಲ್ಗೆ ಎಷ್ಟು ಅಡಿಕ್ಟ್ ಆಗಿದೆ ಎಂದರೆ, ತಮ್ಮ ಪ್ರಾಣ ಹೋಗುತ್ತೆ ಎಂದು ತಿಳಿದಿದ್ದರು ಕೂಡ ಕೆಲವು ಹುಚ್ಚಾಟಗಳನ್ನಾಡುತ್ತಾರೆ. ಇದೀಗ ಕೋಡಿ ಬಿದ್ದಿದ್ದ ಕೆರೆಯಲ್ಲಿ ಯುವಕನೊಬ್ಬ ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಂಡಬೊಮ್ಮನಹಳ್ಳಿಯ ಚೇತನ್ ಕುಮಾರ್ (21) ಮೃತ ದುರ್ದೈವಿ. ಭಾರಿ ಮಳೆಯಿಂದಾಗಿ ಗಂಡಬೊಮ್ಮನಹಳ್ಳಿ ಕೆರೆ ಸಂಪೂರ್ಣ ಭರ್ತಿಯಾಗಿತ್ತು ಎನ್ನಲಾಗುತ್ತಿದೆ.ಈ ವೇಳೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೋಡಿ ಬಿದ್ದ ಕೆರೆಬಳಿ ನಿಂತು ಚೇತನ್ ಕುಮಾರ್ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಸೆಲ್ಫಿ ತೆಗೆಯುತ್ತಿದ್ದಾಗಲೇ ಕಾಲು ಜಾರಿ ಬಿದ್ದು ಯುವಕ ನೀರುಪಾಲಾಗಿದ್ದಾನೆ. ತಕ್ಷಣ ಅಕ್ಕಪಕ್ಕದ ಜನರು ರಕ್ಷಣೆಗೆ ಮುಂದಾಗಿದ್ದಾರೆ. ಆದರೂ ಚೇತನ್ ನನ್ನು ಕಾಪಾಡಲು ಆಗಲಿಲ್ಲ ನೋಡನೋಡುತ್ತಿದ್ದಂತೆ ಯುವಕ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಘಟನೆ ಕುರಿತಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.