ರಾಮನಗರ : ನವೆಂಬರ್ ನಲ್ಲಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್ನಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಪೂರ್ವದಲ್ಲಿ ಚನ್ನಪಟ್ಟಣ ಉಪಚುನಾವಣೆ ನಡೆಯಲಿದೆ. ಹಾಗಾಗಿ ಚುನಾವಣೆ ಪೂರ್ವ ಸಿದ್ಧತೆ ಕುರಿತು ಇಂದು ಸಭೆ ಕರೆದಿದ್ದೆ. ಇನ್ನೂ ಒಂದು ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಂತಿಮವಾಗಿ ದೆಹಲಿ ಮಟ್ಟದಲ್ಲಿ ಬಿಜೆಪಿಯ ಹೈಕಮಾಂಡ್ ಹಾಗೂ ನಾವು ಕೂತು ಚರ್ಚೆ ಮಾಡ್ತೇವೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಜಿಲ್ಲೆಯ ಬಿಡದಿಯ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಯಾರು ಆಗಬೇಕು ಅನ್ನೋದಕ್ಕೆ ಸಭೆ ಕರೆದಿದ್ದೇನೆ. ಜೆಡಿಎಸ್- ಬಿಜೆಪಿ ಎರಡು ಪಕ್ಷಗಳು ಹೊಂದಾಣಿಕೆಯಲ್ಲಿ ಕೆಲಸ ಮಾಡಬೇಕು. ನವೆಂಬರ್ ಒಳಗೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ನಡೆಯಬೇಕಿದೆ. ಅದೇ ಸಮಯದಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ಕೂಡ ನಡೆಯಲಿದೆ ಎಂದರು.
ಚನ್ನಪಟ್ಟಣದಲ್ಲಿ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸಿದ್ದಾರೆ.. 2013 ರಲ್ಲೂ ನಮಗೆ ಹೆಚ್ಚಿನ ಮತಗಳು ಬಂದಿದ್ದವು. ನಮ್ಮ ಸಂಘಟನೆ ದೃಷ್ಟಿಯಿಂದ ಕೂತು ಚರ್ಚೆ ಮಾಡ್ತೇವೆ. ಯಾವುದೇ ಸಮಸ್ಯೆ ಆಗದ ರೀತಿ ಚುನಾವಣೆ ನಡೆಸುತ್ತೇವೆ.ಚನ್ನಪಟ್ಟಣ ಜೆಡಿಎಸ್ನ ಕ್ಷೇತ್ರ. ಕಳೆದ ಎರಡು ಬಾರಿ ಜೆಡಿಎಸ್ ನಿಂದ ಗೆದ್ದಿದ್ದೇವೆ. ಈ ಹಿಂದಿನಿಂದಲೂ ಇದು ಜೆಡಿಎಸ್ ನ ಕ್ಷೇತ್ರ. ನಮ್ಮಲ್ಲಿನ ಸಂಘಟನೆಯಲ್ಲಿ ಕೆಲವೊಂದು ಲೋಪದೋಷಗಳಿಂದ ಹಿಂದೆ ಬಿದ್ದಿದ್ದೇವು ಎಂದು ತಿಳಿಸಿದರು.