ರಾಯಚೂರು : ಈಗಾಗ್ಲೇ ರಾಜ್ಯ ಸರ್ಕಾರ ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿರುವ ಬೆನ್ನಲ್ಲೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಯಚೂರಲ್ಲಿ ಸರ್ಕಾರಿ ಮಕ್ಕಳಿಗೆ ಸೇರಬೇಕಾಗಿದ್ದ ಶೂ ಹಾಗೂ ಸಾಕ್ಸ್ ಗಳು ಅಕ್ರಮವಾಗಿ ಕಳ್ಳ ಸಂತೆಯಲ್ಲಿ ಮಾರಾಟ ಆಗುತ್ತಿದ್ದು ಇದೀಗ, ತಿಪ್ಪೆ ಹಾಗೂ ತೊಟ್ಟಿಯಲ್ಲಿ ಶೂ ಹಾಗೂ ಸಾಕ್ಸ್ ಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಹೌದು ರಾಯಚೂರು ನಗರದ ಲಿಂಗಸುಗೂರು ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. 15 ದಿನಗಳಿಂದ ಅಕ್ರಮವಾಗಿ ಶೂ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ತಿಪ್ಪೆ ಹಾಗೂ ತೊಟ್ಟಿಗಳಲ್ಲಿ ಹೊಸ ಹೊಸ ಶೂಗಳನ್ನು ಎಸೆಯಲಾಗಿದೆ. ಈ ವೇಳೆ ಕೈಗೆ ಸಿಕ್ಕಷ್ಟು ಶೂಗಳನ್ನು ಜನರು ಎತ್ತಿಕೊಂಡು ಹೋಗುತ್ತಿದ್ದಾರೆ. ಮಕ್ಕಳ ಪಾದ ರಕ್ಷಿಸಬೇಕಾದ ಶೂಗಳು ಇದೀಗ ಕಸದ ರಾಶಿಯಲ್ಲಿ ಕಂಡು ಬಂದಿವೆ.
ಹೀಗಾಗಿ ಶಿಕ್ಷಣಾಧಿಕಾರಿಗಳ ಘೋರ ನಿರ್ಲಕ್ಷ್ಯದಿಂದ ಹಾಗೂ ಅಕ್ರಮವಾಗಿ ಶೂ ಮತ್ತು ಸಾಕ್ಸ್ ಗಳನ್ನು ಮಾರಾಟ ಮಾಡುತ್ತಿರುವುದು ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ರಾಶಿರಾಶಿ ಶೂಗಳನ್ನ ತಿಪ್ಪೆಗೆ ಎಸೆದಿದ್ದಾರೆ. ಈ ಕುರಿತು ಡಿಡಿಪಿಐ ಅವರು ಸ್ಪಷ್ಟನೆ ನೀಡಿದ್ದು, ಈ ಒಂದು ಶೂಗಳಿಗೂ ಸರ್ಕಾರಿ ಶಾಲೆಗಳಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೂಡ ನೀಡಿದ್ದಾರೆ.
ಸರ್ಕಾರಿ ಮಕ್ಕಳಿಗೆ ಈ ಒಂದು ಯೋಜನೆಯ ಸವಲತ್ತುಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಸರ್ಕಾರಿ ಶಾಲೆಯಲ್ಲಿ ಓದುವಂತಹ ಬಡ ಮಕ್ಕಳಿಗೆ ಶೂ ಸಾಕ್ಸ್ ಗಳಿಲ್ಲದೆ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಸದ ತೊಟ್ಟಿಯಲ್ಲಿ ಹಾಗೂ ತಿಪ್ಪೆಯಲ್ಲಿ ಶೂ ಸಾಕ್ಸ್ ಬೀಳುತ್ತಿವೆ ಎಂದು ಸಾರ್ವಜನಿಕರು ಇದೀಗ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.