ಬೆಂಗಳೂರು : ಸಿಎಂ ಬದಲಾವಣೆ ಕುರಿತಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸಚಿವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.ಈ ವಿಷಯವಾಗಿ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಸಭೆ ನಡೆಸಿದ ಸಚಿವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಅಂತ ನಿಮಗೆ ಯಾರು ಹೇಳಿದ್ದು? ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸಚಿವರಿಗೆ ಎಚ್ಚರಿಕೆ ನೀಡಿದ ಅವರು, ಪ್ರತ್ಯೇಕ ಸಭೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹುಟ್ಟು ಹಾಕುತ್ತಿದ್ದೀರಿ. ಇಷ್ಟಕ್ಕೂ ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಎಂದು ಹೇಳಿದ್ದು ಯಾರು? ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಸಂಪುಟ ಸದಸ್ಯರಿಗೆ ಸಿದ್ದರಾಮಯ್ಯ ನೀಡಿದ ಸ್ಪಷ್ಟ ಸಂದೇಶ.
ಸಭೆಯಲ್ಲಿ ಕೆಲ ಸಚಿವರು ಹಾಗೂ ನಾಯಕರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ ಅವರು, ಸಿಎಂ ಬದಲಾವಣೆ ಚರ್ಚೆ ಹುಟ್ಟು ಹಾಕುವಂತೆ ಪ್ರತ್ಯೇಕ ಸಭೆ, ರಾಜಕೀಯ ಅಸ್ಥಿರತೆ ಉಂಟಾಗುವಂತೆ ಬಹಿರಂಗ ಹೇಳಿಕೆ ನೀಡುತ್ತಿದ್ದೀರಿ. ಇದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಕೂಡಲೇ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲ ದಿದ್ದರೆ ಹೈಕಮಾಂಡ್ ಯಾವುದೇ ಕಠಿಣ ಕ್ರಮ ಕೈಗೊಂಡರೂ ನಾನು ಹೊಣೆಯಲ್ಲ ಎಂದು ಪರೋಕ್ಷವಾಗಿ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶಿಸ್ತು ಉಲ್ಲಂಘಿಸಿದರೆ ನೋಟಿಸ್ ಕೊಡಿ: ಡಿಕೆಶಿಗೆ ಖರ್ಗೆ ಸೂಚನೆ
ಮುಖ್ಯಮಂತ್ರಿ ಬದಲಾವಣೆ ಹೇಳಿಕೆ, ಪ್ರತ್ಯೇಕ ಸಭೆಗಳ ಬಗ್ಗೆ ಹೈಕಮಾಂಡ್ ಅಸಮಾಧಾನಗೊಂಡಿದ್ದು, ಪಕ್ಷದ ಶಿಸ್ತು ಉಲ್ಲಂಘಿಸುವ ನಾಯಕರಿಗೆ ನೋಟಿಸ್ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ. ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದ ಹೊರತಾಗಿಯೂ ಕೆಲ ನಾಯಕರು ಸುಮ್ಮನಾಗಿಲ್ಲ. ಹೀಗಾಗಿ ಶಿಸ್ತು ಉಲ್ಲಂಘಿಸಿದರೆ ನೋಟಿಸ್ ಜಾರಿ ಮಾಡುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆಶಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.