ಬೆಂಗಳೂರು: ವಾಲ್ಮಿಕಿ ನಿಗಮ ಕರ್ಮಕಾಂಡ, ಮುಡಾ ಸೈಟ್ ಅಕ್ರಮ ಹಗರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಕೆಐಎಡಿಬಿ ಭೂ ಅವ್ಯವಹಾರದ ಉರುಳು ಕೂಡಾ ಸುತ್ತಿಕೊಂಡಿದೆ. ಸರ್ಕಾರಿ ಜಮೀನನ್ನೇ ಬೇರೆಯವರ ಹೆಸರಲ್ಲಿ ಪರಿಗಣಿಸಿ ಪರಿಹಾರ ವಿತರಿಸಿರುವ ಭಾರೀ ಅಕ್ರಮ ಆರೋಪ ಕುರಿತಂತೆ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. “ಸಿಟಿಜನ್ ರೈಟ್ಸ್ ಫೌಂಡೇಷನ್” ಪರವಾಗಿ ಅಧ್ಯಕ್ಷ ಕೆ.ಎ.ಪಾಲ್ ನೀಡಿರುವ ಈ ದೂರು, ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ ಸಹಿತ ಹಲವರಿಗೆ ಉರುಳಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
ಏನಿದು ಆರೋಪ?
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದಲ್ಲೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಯಿಂದ ಭೂಸ್ವಾಧೀನ ಆದೇಶವಾಗಿದೆ. ಈ ಭೂಸ್ವಾಧೀನ ಪ್ರಕ್ರಿಯೆಯ ದಾಖಲೆಗಳನ್ನು ಗಮನಿಸಿದಾಗ ಅರ್ಹರಲ್ಲದವರ ಹೆಸರಿಗೆ ಹಣ ಸಂದಾಯ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಸುತ್ತಮುತ್ತ ನೂರಾರು ಎಕರೆ ಜಮೀನನ್ನು ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಲು ತಯಾರಿ ನಡೆದಾಗಲೇ, ಕುಂದಾಣ ಹೋಬಳಿ ಚಪ್ಪರದಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನಕ್ಕೆ ಜಾಮೀನು ಗುರುತಿಸಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಜಮೀನನ್ನು ರೈತರ ಹೆಸರುಗಳಲ್ಲಿ ಗುರುತಿಸಿ ಅಕ್ರಮವಾಗಿ ಪರಿಹಾರ ನೀಡಲಾಗಿದೆ ಎಂಬುದು ಸಿಟಿಜನ್ ರೈಟ್ಸ್ ಫೌಂಡೇಷನ್ ಆರೋಪ.
ಒಂದೊಮ್ಮೆ ‘ಎವಿಕ್ಷನ್ ನೊಟೀಸ್’ ಅನಂತರ ನೊಟಿಫಿಕೇಶನ್ ಕಾಂಚಾಣ..!?
ಕುಂದಾಣ ಹೋಬಳಿಯ ಚಪ್ಪರದಹಳ್ಳಿ ಗ್ರಾಮದ ಸರ್ವೇ ನಂಬರು 7ರಲ್ಲಿ ಹಲವರು ಅನಧಿಕೃತವಾಗಿ ಕೃಷಿ ಮಾಡುತ್ತಿದ್ದು ತೆರವು ಮಾಡುವ ಸಂಬಂಧ 21.08.84ರಂದು ಆಗಿನ ತಹಶೀಲ್ದಾರರು ‘ಎವಿಕ್ಷನ್ ನೋಟಿಸ್’ ಜಾರಿ ಮಾಡಿದ್ದರು. ಅನಂತರ ಸದರಿ ಜಮೀನನ್ನು ‘ಸರ್ಕಾರಿ ಫಡಾ’ ಎಂದು ಘೋಷಿಸಲಾಗಿತ್ತು. ಆದರೆ, ಕೆಐಎಡಿಬಿ ವತಿಯಿಂದ ಭೂಸ್ವಾದೀನ ಪ್ರಸ್ತಾಪವಾದ ಸಂದರ್ಭದಲ್ಲಿ ಹಲವರನ್ನು ಜಮೀನು ಮಾಲೀಕರೆಂದು ಗುರುತಿಸಿ ಪರಿಹಾರ ಹಂಚಲಾಗಿದೆ ಎಂದು ಆರೋಪಿಸಲಾಗಿದೆ.
ದಿನಾಂಕ 27.07.2023ರಂದು ವಿಶೇಷ ಭೂಸ್ವಾಧೀನಾಧಿಕಾರಿ-2 (ಬಿಎಂಐಸಿಪಿ ಮತ್ತು ಬೆಂಗಳೂರು ಗ್ರಾಮಾಂತರ) ಬಾಳಪ್ಪ ಹಂದಿಗುಂದ ಅವರ ಉಪಸ್ಥಿತಿಯಲ್ಲಿ ನಡೆದ ತೀರ್ಮಾನ ಹಾಗೂ ಅವರ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಸರ್ಕಾರಿ ಹಣ ಹಾಗೂ ಸರ್ಕಾರಿ ಸ್ವತ್ತು ನಷ್ಟವಾಗಿದೆ. ಕೆಐಎಡಿಬಿಯ ಈಗಿನ ಹಾಗೂ ಹಿಂದಿನ ಭೂಸ್ವಾಧೀನಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದು, ಸಮಗ್ರ ತನಿಖೆ ನಡೆಸಿ ಅಕ್ರಮವಾಗಿ ಪರಿಹಾರ ರೂಪದಲ್ಲಿ ಹಣ ಹಂಚಿಕೆಯಾಗಿರುವುದನ್ನು ಪತ್ತೆ ಹಚ್ಚಿ ಅದನ್ನು ವಸೂಲಿ ಮಾಡಬೇಕೆಂದು ಕೆ.ಎ.ಪಾಲ್ ಅವರು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ ಸುತ್ತ ಅನುಮಾನಗಳ ಹುತ್ತ..!
ಈ KIADB ಅವ್ಯವಹಾರ ಆರೋಪ ಬಗ್ಗೆ ಮುಖ್ಯಮಂತ್ರಿಗೆ, ಕೈಗಾರಿಕಾ ಸಚಿವರಿಗೆ, ಸರ್ಕಾರದ ಕಾರ್ಯದರ್ಶಿಗೆ 12.09.2024ರಂದು ಕೆ.ಎ.ಪಾಲ್ ದೂರು ನೀಡಿ, ಹೈಕೋರ್ಟ್ ಪರಿವೀಕ್ಷಣೆಯಲ್ಲಿ ತನಿಖೆಗೆ ಕೋರಿದ್ದರು. ಮುಡಾ ಜೊತೆಗೆ ಮತ್ತೊಂದು ಹಗರಣ ಆರೋಪ ಸುದ್ದಿಯ ಮುನ್ನಲೆಗೆ ಬರುತ್ತದೆ ಎಂಬ ಕಾರಣಕ್ಕಾಗಿ ‘ಸಿಟಿಜನ್ ರೈಟ್ಸ್ ಫೌಂಡೇಷನ್’ನ ದೂರನ್ನು ಸರ್ಕಾರ ನಿರ್ಲಕ್ಷಿಸಿದೆ.
ಸಚಿವ ಎಂ.ಬಿ.ಪಾಟೀಲ್ ಎಡವಟ್ಟು..!
ಕೆಐಎಡಿಬಿ ಅಕ್ರಮ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಕೆಯಾಗುತ್ತಿದ್ದಂತೆಯೇ ವಿವಾದಕ್ಕೆ ಗುರಿಯಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿ-2 ಬಾಳಪ್ಪ ಹಂದಿಗುಂದ ಅವರನ್ನು ವರ್ಗಾಯಿಸಲು ಸರ್ಕಾರ ತಯಾರಿ ನಡೆಸಿತ್ತು. ಆದರೆ, ತಮ್ಮ ಇಲಾಖೆಯಲ್ಲಿನ ವಿವಾದವಕ್ಕೆ ತೇಪೆಹಚ್ಚುವ ಉದ್ದೇಶದಿಂದ ಸಚಿವ ಎಂ.ಬಿ.ಪಾಟೀಲ್ ಅವರು ಈ ಅಧಿಕಾರಿಯನ್ನು ಕೆಐಎಡಿಬಿಯಲ್ಲೇ ಉಳಿಸಿಕೊಳ್ಳುವಂತೆ ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ಈ ಸಂಬಂಧ ಸಚಿವರು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಸಂಗತಿಗಳನ್ನೂ ಸಿಟಿಜನ್ ರೈಟ್ಸ್ ಫೌಂಡೇಷನ್ ಅಧ್ಯಕ್ಷ ಕೆ.ಎ.ಪಾಲ್ ಅವರು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾವೇರಿ ತೀರ್ಥೋದ್ಭವ, ಜಾತ್ರೆಗೆ 75 ಲಕ್ಷ ಹಣ ಬಿಡುಗಡೆ- ಸಚಿವ ರಾಮಲಿಂಗಾರೆಡ್ಡಿ
ಪೋರ್ನ್ ಸ್ಟಾರ್ `ಮಿಯಾ ಖಲೀಫಾ’ ಜೊತೆ ಪಾಕ್ ಮಾಜಿ ಕ್ರಿಕೆಟಿಗನ ವಿಡಿಯೋ ವೈರಲ್ !
BIG NEWS: ‘ಕ್ರೈಂ ಗಣೇಶ್’ ಎಂದೇ ಖ್ಯಾತರಾಗಿದ್ದ ‘ಪತ್ರಕರ್ತ ಗಣೇಶ್’ ಇನ್ನಿಲ್ಲ | Crime Ganesh No More
BREAKING: ಕನ್ನಡ ಚಲನಚಿತ್ರ ನಿರ್ಮಾಪಕ, ಉದಯ ಟಿವಿ ಅಧ್ಯಕ್ಷ ಸೆಲ್ವಂ ಇನ್ನಿಲ್ಲ