ಧಾರವಾಡ : ಹಿರಿಯ ಸಂಶೋಧಕರಾದಂತಹ ಡಾಕ್ಟರ್ ಎಂ ಎಂ ಕಲಬುರ್ಗಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 3ನೇ ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಧಾರವಾಡ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಬೆಳಗಾವಿಯ ಪ್ರವೀಣ್ ಎಂಬಾತ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಧಾರವಾಡ ಪೀಠದ ಏಕಸದಸ್ಯ ಪೀಠ, ನೋಟಿಸ್ ನೀಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಪ್ರವೀಣ್ ಈ ಹಿಂದೆ ಕೂಡ ಎರಡು ಬಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಪ್ರವೀಣ್ ಕಳೆದ 2019ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. 138 ಸಾಕ್ಷಿಗಳ ಪೈಕಿ ಸದ್ಯ 28ನೇ ಸಾಕ್ಷಿಯ ವಿಚಾರಣೆ ನಡೆದಿರುವುದರಿಂದ ಜಾಮೀನು ಪಡೆಯುವ ಆಶಾಭಾವ ಹೊಂದಿದ್ದಾನೆ.
ಪ್ರಕರಣದ ಮೊದಲನೇ ಆರೋಪಿ ಅಮೋಲ್ ಕಾಳೆ ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಂದಿದ್ದ ಆರೋಪ ಎದುರಿಸುತ್ತಿದ್ದಾನೆ.
ಕಲಬುರ್ಗಿ ಅವರ ಮನೆಗೆ ಕಾಳೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಬಂದು ಕೊಲೆಗೈದ ಬಳಿಕ, ಆತನನ್ನು ಕರೆದೊಯ್ದ ಆರೋಪ ಪ್ರವೀಣ್ ಮೇಲಿದೆ.ನಾಲ್ಕನೇ ಆರೋಪಿ ವಾಸುದೇವ್ ಭಗವಾನ್ ಸೂರ್ಯವಂಶಿ ಅಲಿಯಾಸ್ ವಾಸು ಅಲಿಯಾಸ್ ಮೆಕ್ಯಾನಿಕ್ ಹಾಗೂ ಆರನೇ ಆರೋಪಿ ಅಮಿತ್ ಬಡ್ಡಿ ಅಲಿಯಾಸ್ ಅಮಿತ್ ಅಲಿಯಾಸ್ ಗೋವಿಂದ್ ಎಂಬವರಿಗೆ ಕಳೆದ ಜುಲೈ 23ರಂದು ಹೈಕೋರ್ಟ್ ಜಾಮೀನು ನೀಡಿದೆ.