ಬೆಂಗಳೂರು: ಗ್ರೂಪ್ ʼಸಿʼ ಹುದ್ದೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಮತ್ತು ಸ್ಥಳೀಯ ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆ ಮಾಡುವುದರ ಮೂಲಕ ತುಂಬಲಾಗುತ್ತಿದೆ ಎನ್ನುವ ಲಿಖಿತ ಮಾಹಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಎಚ್.ಎ.ಎಲ್.ನ ಹಿರಿಯ ಅಧಿಕಾರಿಗಳು ಈಗ ಸಂಸ್ಥೆಯ ನೇಮಕಾತಿಯಲ್ಲಿ ಈ ಎಲ್ಲ ಭರವಸೆಗಳನ್ನು ಗಾಳಿಗೆ ತೂರಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ನಿರಾಕರಿಸಿದ್ದಾರೆ. ಇದು ಸರ್ಕಾರವನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಇಂದು ಎಚ್.ಎ.ಎಲ್.ನ ಕೇಂದ್ರೀಯ ಕನ್ನಡ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಡಾ.ಬಿಳಿಮಲೆ, ಸಂಸ್ಥೆಯ ಆಡಳಿತದಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯವನ್ನು ಕಲ್ಪಿಸುವ ಕುರಿತಂತೆ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಚನೆಗೆ ಪ್ರತಿಕ್ರಿಯಿಸಿರುವ ಎಚ್.ಎ.ಎಲ್.ನ ಸಂಸ್ಥೆಯ ಅಪರ ಪ್ರಧಾನ ವ್ಯವಸ್ಥಾಪಕರು ಸಂಸ್ಥೆಯ ಗ್ರೂಪ್ ʼಸಿʼ ಮತ್ತು ʼಡಿʼ ವೃಂದದ ಹುದ್ದೆಗಳಲ್ಲಿ ಶೇ.90ಕ್ಕೂ ಹೆಚ್ಚಿನ ಉದ್ಯೋಗಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದು, ಈ ವೃಂದಗಳ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಸಂಪೂರ್ಣ ಅವಕಾಶವನ್ನು ನೀಡಲಾಗುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಶೀಘ್ರದಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್.ಎ.ಎಲ್ ಸಂಸ್ಥೆಗೆ ಭೇಟಿ ನೀಡಿ ಈ ಕುರಿತಂತೆ ಸಮಗ್ರ ಪರಿಶೀಲನೆ ಕೈಗೊಳ್ಳಲಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಲಿದೆ. ಎಚ್.ಎ.ಎಲ್.ನಲ್ಲಿ ಕನ್ನಡಿಗರ ಹಿತ ಕಾಯಲು ಪ್ರಾಧಿಕಾರವು ಬದ್ಧವಾಗಿದ್ದು, ಕೇಂದ್ರೀಯ ಕನ್ನಡ ಸಂಘದ ಹೋರಾಟಕ್ಕೆ ತನ್ನೆಲ್ಲಾ ನೈತಿಕ ಬೆಂಬಲವನ್ನು ನೀಡಲಿದೆ ಎಂದಿದ್ದಾರೆ.
ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದ ಕಡೆಗಣನೆ ಖಂಡನೀಯ
ಎಚ್.ಎ.ಎಲ್ ವತಿಯಿಂದ ನಿಶ್ಚಿತ ಅವಧಿಯ ಉದ್ಯೋಗಾಂಕ್ಷಿಗಳಿಗೆ ನಡೆಸಲಾಗಿರುವ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನೀಡಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಡೆಗಣಿಸಿರುವುದು ಖಂಡನೀಯ ಎಂದಿರುವ ಡಾ.ಬಿಳಿಮಲೆ, ನೇಮಕಾತಿ ಪರೀಕ್ಷೆಯಲ್ಲಿ ಕೇವಲ ಆಂಗ್ಲ ಮತ್ತು ಹಿಂದಿ ಭಾಷೆಗಳ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕೆಂಬ ಹೊಸ ನಿಯಮವನ್ನು ರೂಪಿಸಲಾಗಿದೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿ ಈ ಕಾರಣಕ್ಕೆ ನೂರಾರು ಜನ ಕನ್ನಡೇತರ ಅಭ್ಯರ್ಥಿಗಳು ಬೆಂಗಳೂರಿನ ಎಚ್.ಎ.ಎಲ್.ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಇದು ತ್ರಿಭಾಷಾ ಸೂತ್ರದ ಉಲ್ಲಂಘನೆಯಷ್ಟೇ ಅಲ್ಲ, ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಸರ್ಕಾರವು ನೀಡಿರುವ ಅಗೌರವವೆಂದು ಹೇಳಿದ್ದಾರೆ. ಈ ಕುರಿತಂತೆ ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕೆಂದು ಸಂಘದ ಪ್ರತಿನಿಧಿಗಳಿಗೆ ಆಗ್ರಹಿಸಿರುವ ಬಿಳಿಮಲೆ, ಅವಶ್ಯಕವಿದ್ದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗಬೇಕೆಂದು ಸೂಚನೆಯನ್ನು ನೀಡಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯವರು ಇದೇ ಮಾದರಿಯ ನೇಮಕಾತಿಯಲ್ಲಿ ಕರ್ನಾಟಕ ರಾಜ್ಯದ ಉದ್ಯೋಗ ವಿನಿಮಯ ಕೇಂದ್ರದ ನೋಂದಣಿಯನ್ನು ಅಭ್ಯರ್ಥಿಗಳಿಗೆ ಕಡ್ಡಾಯಗೊಳಿಸಿದ್ದು, ಇದು ಸ್ಥಳೀಯರಿಗೆ ಉದ್ಯೋಗಾವಕಾಶಕ್ಕೆ ಸಹಕಾರಿಯಾಗಿದೆ. ಆದರೆ ಎಚ್.ಎ.ಎಲ್.ನ ಈ ಕನ್ನಡ ವಿರೋಧಿ ಧೋರಣೆ ಮಾತ್ರ ಸ್ಥಳೀಯರ ಉದ್ಯೋಗಾವಕಾಶವನ್ನು ಕಸಿದಿದೆ ಎಂದು ಬೇಸರ ವ್ಯಕ್ತಪಡಿಸಿರುವ ಡಾ.ಬಿಳಿಮಲೆ ಸಂವಿಧಾನದ ಆಶಯದಂತೆ ಕೇಂದ್ರ ಸರ್ಕಾರದ ಉದ್ದಿಮೆಗಳು ಸ್ಥಳೀಯ ಭಾಷೆ ಸಂಸ್ಕೃತಿಗಳಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಎಚ್.ಎ.ಎಲ್ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಡಿ.ರಾಜೇಶ್, ಪ್ರಧಾನ ಕಾರ್ಯದರ್ಶಿ ದೇವರಾಜ್ , ಸಂಘಟನಾ ಕಾರ್ಯದರ್ಶಿ ಜಯತೀರ್ಥ, ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಸೇರಿದಂತೆ ಮತ್ತಿತರರು ಇದ್ದರು.
ಹರಿಯಾಣದಲ್ಲಿ ಸತತ 3ನೇ ಬಾರಿಗೆ ಬಿಜೆಪಿ ಅಧಿಕಾರ ಗದ್ದುಗೆಗೇರಲು ದಾಪುಗಾಲು: ರಾಜಕುಮಾರ ಪಾಟೀಲ್ ತೇಲ್ಕೂರ ಸಂತ