ಬೆಂಗಳೂರು : ಜಾತಿ ನಿಂದನೆ ಆರೋಪ ಸಂಬಂಧ ಹಾಸ್ಯನಟ ಹುಲಿ ಕಾರ್ತಿಕ್ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೆ ಹುಲಿ ಕಾರ್ತಿಕ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಮೇಲೆ ಎಫ್ ಐ ಆರ್ ದಾಖಲಾಗಿರುವ ವಿಷಯ ತಿಳಿದು ಹುಲಿ ಕಾರ್ತಿಕ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ಯಾವುದೇ ಸಮುದಾಯವನ್ನು ಹಾಸ್ಯ ಮಾಡುವ ಉದ್ದೇಶ ಇಲ್ಲ. ಮನರಂಜನೆ ನೀಡುವ ಉದ್ದೇಶದಿಂದ ನಟನೆ ಮಾಡುತ್ತಿದ್ದೇವೆ. ಒಂದು ವೇಳೆ ಆ ರೀತಿ ನಿಮಗೆ ಕೇಳಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿ. ಯಾರಿಗೂ ನೋವುಂಟು ಮಾಡುವ ಉದ್ದೇಶ ನಮ್ಮದಲ್ಲ ಎಂದು ಹಾಸ್ಯನಟ ಹುಲಿ ಕಾರ್ತೀಕ್ ಸ್ಪಷ್ಟನೆಯನ್ನು ನೀಡಿದ್ದಾರೆ.
ನಾವು ಎಲ್ಲ ಸಮುದಾಯವನ್ನು ನಗಿಸುವ ಕೆಲಸ ಮಾಡುತ್ತೇವೆ. ಯಾವುದೇ ಸಮುದಾಯವನ್ನು ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ. ಯಾವುದೇ ಜಾತಿ, ಧರ್ಮದ ಬಗ್ಗೆ ಹಾಸ್ಯ ಮಾಡುವುದಕ್ಕೆ ಖಾಸಗಿ ವಾಹಿನಿಯಲ್ಲಿ ಅವಕಾಶ ಇರುವುದಿಲ್ಲ. ಸೂಕ್ತವಾಗಿ ವ್ಯವಸ್ಥೆ ಇದ್ದು ಅದರಂತೆ ಸ್ಕ್ರಿಪ್ಟ್ ತಯಾರಾಗುತ್ತದೆ. ಇನ್ನು ಕಾಮಿಡಿ ಸ್ಕಿಟ್ನಲ್ಲಿ ನಾನು ಬಳಸಿರುವ ಪದ ‘ಹೊಂಡಾ’ ಜಾತಿ ಸೂಚಕ ಪದವಲ್ಲ.
ತುಕಾಲಿ ಸಂತೋಷ್ ಹೇಳಿದ ಡೈಲಾಗ್ಗೆ ಕೌಂಟರ್ ಡೈಲಾಗ್ ಹೇಳುವಾಗ ‘ನೀನು ಗುಂಡನಾ? ರೋಡ್ ನಲ್ಲಿ ಬಿದ್ದಿರುವ ಹೊಂಡಾ ಇದ್ದಂಗ್ ಇದ್ದೀಯಾ’ ಎಂದು ಹೇಳಿದ್ದೇನೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಈ ವಾಕ್ಯ ಬಳಕೆ ಮಾಡಿವಾಗ ಸ್ಪಷ್ಟವಾಗಿ ಹೊಂಡಾ ಎಂದು ಬಳಸಿದ್ದೇನೆ. ಆದರೆ, ಮ್ಯೂಸಿಕ್ ಜೊತೆಗೆ ಡೈಲಾಗ್ ಹೇಳುವಾಗ ಹೊಂಡಾ ಪದ ಸಮುದಾಯದ ಹೆಸರಿಸಿರುವಂತೆ ಕೇಳಿಸಿರಬಹುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಪ್ರಕರಣ ಹಿನ್ನೆಲೆ?
ಒಂದು ಸಮುದಾಯವನ್ನು ಹೀಗಳೆಯುವ ರೀತಿಯಲ್ಲಿ ಹುಲಿ ಕಾರ್ತಿಕ್ ಮಾತನಾಡಿದ್ದರು.ಹುಲಿ ಕಾರ್ತಿಕ್ ಅವರು ಯಾವುದೋ ರೋಡ್ ಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ ಎಂದು ಹೇಳಿಕೆ ನೀಡಿದ್ದರು. ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.
ಹುಲಿ ಕಾರ್ತಿಕ್ ಅಲ್ಲದೆ ‘ಅನುಬಂಧ’ ಅವಾರ್ಡ್ಸ್ನ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕರ ಮೇಲೂ ಕೇಸ್ ದಾಖಲಾಗಿದೆ. ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ A-1 ಹುಲಿ ಕಾರ್ತಿಕ್, A-2 ಅನುಬಂಧ ಸ್ಕ್ರಿಪ್ಟ್ ರೈಟರ್, A-3 ಅನುಬಂಧ ಡೈರೆಕ್ಟರ್, A-4 ನಿರ್ಮಾಪಕನ ವಿರುದ್ದ ದೂರು ದಾಖಲಾಗಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.