ದಾವಣಗೆರೆ : ಮದ್ಯದಂಗಡಿ ನಡೆಸಲು ಕಟ್ಟಡವನ್ನು ಬಾಡಿಗೆ ಕೊಡದಂತಹ ಕಟ್ಟಡದ ಮಾಲೀಕ ಹಾಗೂ ಆತನ ಕುಟುಂಬಸ್ಥರ ಮೇಲೆ ಪುರಸಭೆ ಕಾಂಗ್ರೆಸ್ ಸದಸ್ಯ ಹಾಗೂ ಆತನ 50 ಜನ ಸಹಚರರಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.
ಕಟ್ಟಡ ಮಾಲೀಕ ರುದ್ರೋಜಿರಾವ್, ಆತನ ಕುಟುಂಬ ಸದಸ್ಯರಾದ ಶ್ವೇತಾ, ರಾಹುಲ್, ಶಿವಾಜಿ ಎಂಬುವವರ ಮೇಲೆ ಪೊಲೀಸರ ಮುಂದೆಯೇ ಪುರಸಭೆ ಕಾಂಗ್ರೆಸ್ ಸದಸ್ಯ ಶ್ರೀಕಾಂತ್ ಚೌಹಾಣ್ ಮತ್ತು ಆತನ 50 ಸಹಚರರಿಂದ ಹಲ್ಲೆ ನಡೆದಿದೆ. ಚನ್ನಗಿರಿ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪ 3 ಅಂತಸ್ತಿನ ಸ್ವಂತ ಕಟ್ಟಡದ ಮಾಲೀಕತ್ವ ಹೊಂದಿರುವ ರುದ್ರೋಜಿರಾವ್, ಪುರಸಭೆ ಕಾಂಗ್ರೆಸ್ ಸದಸ್ಯನಿಗೆ 3 ಅಂತಸ್ತು ಕಟ್ಟಡದಲ್ಲಿ 2 ಅಂತಸ್ತಗಳನ್ನು ಬಾಡಿಗೆ ನೀಡಿದ್ದರು.
ಕಳೆದ 12 ವರ್ಷಗಳಿಂದ ಶ್ರೀಕಾಂತ್ ಚೌಹಾಣ್ ಇದೇ ಕಟ್ಟಡದಲ್ಲಿ ಮದ್ಯದಂಗಡಿ ನಡೆಸುತ್ತಿದ್ದ. ಮದ್ಯದಂಗಡಿ ಲೈಸೆನ್ಸ್ ನಕಲಿ ಸಹಿ ಮಾಡಿ ರಿನೇವಲ್ ಮಾಡುತ್ತಿದ್ದ.ಇದನ್ನು ಪ್ರಶ್ನಿಸಿದ ರುದ್ರೋಜಿರಾವ್, ಶ್ರೀಕಾಂತ್ ಚೌಹ್ವಾಣ್ ಮೇಲೆ ಜಿಲ್ಲಾಧಿಕಾರಿ ಸೇರಿದಂತೆ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಶ್ರೀಕಾಂತ್ ಚೌಹಾಣ್ ತನ್ನ ಸಹಚರರೊಂದಿಗೆ ಬಂದು ರುದ್ರೋಜಿರಾವ್ ಮತ್ತು ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಈ ಕುರಿತಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.