ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಯಾವುದೇ ಡೆಡ್ ಲೈನ್ ಇಲ್ಲ. ಹೀಗಾಗಿ ಸಾರ್ವಜನಿಕರು ಗಾಬರಿಯಾಗುವ ಅಥವಾ ಆತುರಪಡುವ ಅಗತ್ಯ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ಇ-ಖಾತಾ ಬಗೆಗಿನ ಗೊಂದಲಗಳ ಬಗ್ಗೆ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬೆನ್ನಿಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಬಿಬಿಎಂಪಿ ವ್ಯಾಪ್ತಿಯ ಕೆಲವು ಭಾಗದಲ್ಲಿ ಮಧ್ಯವರ್ತಿಗಳು ಇ-ಖಾತಾ ಗೆ ಸರ್ಕಾರ ಸಮಯ ನಿಗಧಿ ಮಾಡಿದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸಿ, ಇ-ಖಾತೆ ಮಾಡಿಸಿಕೊಡುವುದಾಗಿ ಜನರನ್ನು ಸುಲಿಗೆ ಮಾಡಿರುವ ಘಟನೆ ಗಮನಕ್ಕೆ ಬಂದಿದೆ.
ಆದರೆ, ಆಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಸರ್ಕಾರ ಯಾವುದೇ ಸಮಯ ನಿಗದಿ ಮಾಡಿಲ್ಲ. ಹೀಗಾಗಿ ಸಾರ್ವಜನಿರಕರು ಗಾಬರಿಗೊಳಗಾಗದೆ, ಆತುರಪಡದೆ ತಮ್ಮ ಸಮಯ ನೋಡಿಕೊಂಡು ಇ-ಖಾತಾ ಮಾಡಿಸಿಕೊಳ್ಳಬಹುದು. ಊಹಾಪೋಹಗಳಿಗೆ ಕಿವಿಕೊಟ್ಟು ಆತಂಕಕ್ಕೆ ಒಳಗಾಗಬೇಡಿ” ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು.
“ನಕಲಿ ನೋಂದಣಿ ಪ್ರಕರಣಗಳನ್ನು ತಡೆಯೊಡ್ಡುವ ಸಲುವಾಗಿಯೇ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಇ-ಖಾತಾ ಪಡೆಯಲು ಆತುರ ಬೇಕಿಲ್ಲ. ನಿವೇಶನಗಳನ್ನು ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆಯಲ್ಲಿ ಮಾತ್ರ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಅಲ್ಲದೆ, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಪಾಲಿಕೆಯ ವಿಶೇಷ ಆಯುಕ್ತರ ಜೊತೆ ಚರ್ಚಿಸಿ ಇ-ಖಾತಾ ಪ್ರಕ್ರಿಯೆಯನ್ನೂ ಸರಳೀಕರಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸೂಕ್ತ ಕ್ರಮ ಜರುಗಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮಧ್ಯವರ್ತಿಗಳ ಹಾವಳಿ-ನಕಲಿ ನೋಂದಣಿಗೆ ಶಾಶ್ವತ ಪರಿಹಾರ
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹಾಗೂ ನಕಲಿ ನೋಂದಣಿಗಳನ್ನು ತಪ್ಪಿಸಿ, ಆಸ್ತಿ ಮಾಲೀಕರ ಮಾಲೀಕತ್ವವನ್ನು ರಕ್ಷಿಸಲು ಇ-ಖಾತಾ ವ್ಯವಸ್ಥೆ ಶಾಶ್ವತ ಪರಿಹಾರ ನೀಡಲಿದೆ ಎಂದರು.
ಮುಂದುವರೆದು, “ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿರುವುದು ನಿಜ. ಆದರೆ, ಆಸ್ತಿ ಮಾಲೀಕರು ಒಂದು ಬಾರಿ ಇ-ಖಾತಾ ಮಾಡಿಸಿಕೊಂಡರೆ ಯಾವ ಮಧ್ಯವರ್ತಿಗಳ ಮುಲಾಜಿಲ್ಲದೆ ಬದುಕಬಹುದು. ಸಾರ್ವಜನಿಕರ ಅನುಕೂಲಕ್ಕಾಗಿಯೇ ಹಲವು ಸವಾಲುಗಳ ನಡುವೆಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದು ನಕಲಿ ನೋಂದಣಿಗಳನ್ನು ತಡೆಯುವುದಕ್ಕೂ ಇದು ಸಹಕಾರಿಯಾಗಲಿದೆ.
ಇ-ಖಾತಾ ವ್ಯವಸ್ಥೆಯನ್ನು ಒಂದು ಬಾರಿ ಅನುಷ್ಠಾನ ಮಾಡಿದರೆ, ಇಡೀ ದೇಶದಲ್ಲಿ ಅತ್ಯುತ್ತಮ ಮಾದರಿ ಖಾತಾ ವ್ಯವಸ್ಥೆಯನ್ನು ನೀಡಿದಂತಾಗುತ್ತದೆ. ಸಣ್ಣ ಪುಟ್ಟ ಗೊಂದಲಗಳಿಗೆ ವಾರದಲ್ಲಿ ತೆರೆ ಬೀಳಲಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು