ಚಿಕ್ಕಮಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರ ಷಡ್ಯಂತರಗಳಿಗೆ ನಾನು ಯಾವುದೇ ಕಾರಣಕ್ಕೂ ಹೆದರಲ್ಲ ಜಗ್ಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಹಿಂದೆ ರಾಕ್ಷಸರು ಕೂಡ ಹೆದರಲ್ಲ ಅಂತಿದ್ದರಂತೆ, ನಾವು ಹಾಗೆ ಅಂದುಕೊಳ್ಳಬಹುದಾ ಎಂದು ವ್ಯಂಗ್ಯವಾಡಿದ್ದಾರೆ.
ಚಿಕ್ಕಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂಗೆ ಸಂವಿಧಾನ-ಕಾನೂನಿನ ಬಗ್ಗೆ ಭಯವಿಲ್ಲ. ನೈತಿಕತೆ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಅವರು ಜನರಿಗಿಂತಾ ದೊಡ್ಡವರಾ? ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರಲ್ಲ ಅಂದ್ರೆ, ನಾವು ಮನುಷ್ಯರು ಅನ್ಕೊಳ್ಳಾದಾ? ರಾಕ್ಷಸರು ನಾವು ಯಾರಿಗೂ ಹೆದರಲ್ಲ ಅಂತಿದ್ರಂತೆ, ಹಾಗೇ ಅನ್ಕೋಬೇಕಾ ಎಂದು ವ್ಯಂಗ್ಯವಾಡಿದರು.
ಇಂದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸ್ವಾಭಿಮಾನ ಸಮಾವೇಶದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು ಅಧಿಕಾರ-ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ, ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಆಗಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದೋನು ನೀರು ಕುಡಿಯಬೇಕು, ಅದು ಪ್ರಕೃತಿ ಧರ್ಮ ಎಂದರು.
ಜಾತಿ ಗಣತಿ ವಿರೋಧಿಸಿದ್ದು ಆರ್‌ಎಸ್‌ಎಸ್, ಬಿಜೆಪಿ ಅಲ್ಲ. ರಾಹುಲ್ ಗಾಂಧಿಯವರ ಮುತ್ತಜ್ಜ, ಇಂದಿರಾ ಗಾಂಧಿ ತಂದೆ, ರಾಜೀವ್ ಗಾಂಧಿ ಅಜ್ಜ ನೆಹರೂ ಮೀಸಲಾತಿ ವಿರೋಧಿಸಿದ್ದು. ಅಭಿವೃದ್ಧಿ, ದಕ್ಷತೆಗೆ ಅಡ್ಡಿಯಾಗುತ್ತದೆಂದು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದದ್ದು ನೆಹರೂ. ರೇವಣ್ಣ ತಪ್ಪು ತಿಳಿದಿದ್ದಾರೆ. ಕಾಂಗ್ರೆಸ್ಸಿಗರು ಮೀಸಲಾತಿಗೆ ವಿರೋಧ ಇದ್ದು, ಈಗ ನಾಟಕ ಆಡ್ತಿದ್ದಾರೆ ಎಂದು ಕಿಡಿಕಾರಿದರು.