ಬೆಳಗಾವಿ : ಇತ್ತೀಚಿಗೆ ಹಣ ಡಬಲ್ ಮಾಡಿಕೊಡುವುದಾಗಿ ಹೇಳುವ ಸೈಬರ್ ವಂಚಕರಿಗೆ ಬಿಸಿನೆಸ್ ಮ್ಯಾನ್ ಗಳು , ಟೆಕ್ಕಿಗಳೇ ಟಾರ್ಗೆಟ್ ಆಗಿರುತ್ತಿದ್ದರು. ಇದೀಗ ರಾಜ್ಯದಲ್ಲಿ ಮತ್ತೊಂದು ಸೈಬರ್ ವಂಚಕರ ಜಾಲ ಪತ್ತೆಯಾಗಿದ್ದು, ಇವರಿಗೆ ಬಾಣಂತಿಯರೇ ಟಾರ್ಗೆಟ್ ಆಗಿದ್ದಾರೆ. ಗರ್ಭಿಣಿಯರು ಮತ್ತು ಬಾಣಂತಿಯರನ್ನೇ ಗುರಿಯಾಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಹೆಸರಲ್ಲಿ ಸೈಬರ್ ವಂಚನೆ ಪ್ರಕರಣಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿವೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪೋಷಣ ಯೋಜನೆ ಅಡಿಯಲ್ಲಿ ನಿಮ್ಮ ಖಾತೆಗೆ ಹಣ ಬರುತ್ತದೆ.ನಿಮ್ಮ ವಾಟ್ಸಪ್ ಗೆ ಒಂದು ಲಿಂಕ್ ಕಳಿಸುತ್ತೇವೆ ಅದನ್ನು ಕ್ಲಿಕ್ ಮಾಡಿ ನಂತರ ಬರುವ ಓಟಿಪಿಯನ್ನು ನಮಗೆ ಹೇಳಿ ಎಂದು ಹೇಳುತ್ತಾರೆ. ಬಳಿಕ ಇವರು ಓಟಿಪಿ ಹೇಳಿದ ಬಳಿಕ ಬಾಣಂತಿಯರ ಖಾತೆಯಲ್ಲಿದ್ದ ಎಲ್ಲಾ ಹಣವನ್ನು ಲಪಟಾಯಿಸುತ್ತಾರೆ. ಕಳೆದ ಎರಡು ದಿನಗಳಲ್ಲಿ ಬೆಳಗಾವಿ ಸಿಇಎನ್ ಠಾಣೆಗೆ ಐವರು ಬಾಣಂತಿಯರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಐವರು ಮಹಿಳೆಯರು ಒಟ್ಟು 82,080 ರೂ. ಹಣವನ್ನು ಕಳೆದುಕೊಂಡಿದ್ದಾರೆ. ಇನ್ನು ಇತ್ತಿಚಿಗೆ ಹೆರಿಗೆ ಆಗಿರುವ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ವಿವರವನ್ನು ಕಲೆ ಹಾಕಿರುವ ಆರೋಪಿಗಳು, ಈ ರೀತಿಯ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಿಗಳಿಗೆ ಬಾಣಂತಿಯರ ಹೆಸರು, ಮೊಬೈಲ್ ನಂಬರ್ ಹೇಗೆ ಸಿಕ್ಕಿತು? ಯಾರು ಕೊಟ್ಟಿದ್ದಾರೆ ಎಂಬ ಕುರಿತು ಹೆಚ್ಚಿನ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.