ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಮೊದಲು ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಈ ವೇಳೆ ಅವರಿಗೆ ರಾಜಾತಿಥ್ಯ ನೀಡಿರುವ ವಿಚಾರಕ್ಕೆ ಎರಡು FIR ದಾಖಲಾಗಿತ್ತು. ಈ ಒಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಅಲ್ಲಿನ ವ್ಯವಸ್ಥೆ ನೋಡಿ ದಂಗಾಗಿದ್ದಾರೆ.
ಹೌದು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು, ಜೈಲಿನಲ್ಲಿ ನಟ ದರ್ಶನ್ ಒಂದು ಕೈಯಲ್ಲಿ ಕಾಫಿ ಕುಡಿಯುತ್ತಾ, ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿರುವುದು ಹಾಗೂ ವಿಡಿಯೋ ಕಾಲ್ ನಲ್ಲಿ ವ್ಯಕ್ತಿಯ ಜೊತೆ ಮಾತನಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ.
ಈ ಎರಡು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ವಿಸ್ತೃತ ಆರೋಪ ಪಟ್ಟಿ ತಯಾರಿಸಿದ್ದಾರೆ. ಸದ್ಯ ಈ ಆರೋಪ ಪಟ್ಟಿ ಅಂತಿಮ ಹಂತದ ತಯಾರಿಯಲ್ಲಿದ್ದು,ಕಾನೂನು ತಜ್ಞರ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗ!
ದರ್ಶನ್ ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ಎಫ್ಐಆರ್ ದಾಖಲಾದ ಬಳಿಕ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ನಡೆಸಿದ ತನಿಖೆ ವೇಳೆ ರಾಜಾತಿಥ್ಯದ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ.ಜೈಲಿನಲ್ಲಿರುವ ಕೆಲ ರೌಡಿಗಳಿಗೆ ದುಬಾರಿ ಮದ್ಯ ಸರಬರಾಜು ಆಗುತ್ತಿದೆಯಂತೆ. ಅದು ಮೂರು ಹಂತಗಳಲ್ಲಿ ಹೊರಗಿನಿಂದ ಜೈಲಿನೊಳಗೆ ಮದ್ಯ ತಲುಪುತಿತ್ತು ಎಂಬ ಸ್ಪೋಟಕ ವಿಷಯ ತಿಳಿದುಬಂದಿದೆ.
ಮದ್ಯದ ಬಾಟಲ್ ಅಸಲಿ ಬೆಲೆ 2,000 ರೂಪಾಯಿ ಇದ್ದರೆ ಅದನ್ನು ಒಳಗೆ ಕೊಡಲು 25 ಸಾವಿರ ರೂಪಾಯಿ ನೀಡಲಾಗುತ್ತಿದೆಯಂತೆ. ಬಾಟಲ್ನ ಓರ್ವ ಹೊರಗಡೆಯಿಂದ ತಂದರೆ, ಅದನ್ನು ಜೈಲಿನ ಒಳಗೆ ತೆಗೆದುಕೊಂಡು ಹೊಗುವವನು ಮತ್ತೊಬ್ಬನಂತೆ. ಬಳಿಕ ಅದನ್ನು ರೌಡಿಗೆ ತಲುಪಿಸೊನು ಮತ್ತೋಬ್ಬನಂತೆ.
ಇನ್ನು ಈ ಸರಬರಾಜು ಪ್ರಕ್ರಿಯೆಯಲ್ಲಿ ಜೈಲಿನ ಕೆಲ ಸಿಬ್ಬಂದಿಗಳು ಹಾಗೂ ಕೆಲ ಸಜಾ ಬಂಧಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಆಗ್ನೇಯ ವಿಭಾಗದ ಪೊಲೀಸರು ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.