ಬೆಂಗಳೂರು: ದಲಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ತೇಜೋವದೆ ಮಾಡಿ ದುರ್ಬಲಗೊಳಿಸಲು ನಡೆಯುತ್ತಿರುವ ಷಡ್ಯಂತರಗಳನ್ನು ನಾಡಿನ ವಕೀಲ ಸಮುದಾಯ ಖಂಡಿಸಿದೆ.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದಂತ ವಕೀಲರ ರಾಜ್ಯ ಮಟ್ಟದ ಸಮಾವೇಶದಲ್ಲಿ ಈ ಸಂಬಂಧ ಮಹತ್ವದ ನಿರ್ಣಯವನ್ನು ವಕೀಲರು ಕೈಗೊಂಡಿದ್ದಾರೆ.
ನಿರ್ಣಯಗಳು:
1. ದಲಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ತೇಜೋವದೆ ಮಾಡಿ ದುರ್ಬಲಗೊಳಿಸಲು ನಡೆಯುತ್ತಿರುವ ಷಡ್ಯಂತರಗಳನ್ನು ನಾಡಿನ ವಕೀಲ ಸಮುದಾಯ ಖಂಡಿಸುತ್ತದೆ. ಕರ್ನಾಟಕ ರಾಜ್ಯ ಸರ್ಕಾರವನ್ನು ಅಸ್ತಿರಗೊಳಿಸಲು ನಡೆಯುತ್ತಿರುವ ಪಿತೂರಿಗಳಿಗೆ ಪೂರಕವಾಗಿ ಮಾನ್ಯ ರಾಜ್ಯಪಾಲ ಥಾವರ್ ಚೆಂದ್ ಗೆಹಲೋಟ್ ಅವರು ಕೂಡ ವರ್ತಿಸುತ್ತಿದ್ದಾರೆ. ಜನತಂತ್ರದ ಮೂಲಕ ಸಂಪೂರ್ಣ ಬಹುಮತದಿಂದ ಚುನಾಯಿತ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಎಲ್ಲಾ ರೀತಿಯ ಪಿತೂರಿಗಳನ್ನು ಸಮಾವೇಶ ಖಂಡಿಸುತ್ತದೆ. ಭಾರತದ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರಾಜ್ಯಪಾಲರನ್ನು ತಕ್ಷಣ ವಾಪಸು ಕರೆಸಿಕೊಳ್ಳಬೇಕೆಂದು ಮಾನ್ಯ ರಾಷ್ಟ್ರಪತಿಗಳನ್ನು ಒತ್ತಾಯಿಸುತ್ತೇವೆ.
2. ಮುಡಾ ಪ್ರಕರಣದಲ್ಲಿ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ಸಮಗ್ರವಾಗಿ ಪರಿಗಣಿಸಿರುವುದಿಲ್ಲ ಎಂಬ ಅಂಶ ತಿಳಿದುಬಂದಿದೆ. ಕೇವಲ ಎದರುದಾರರು ಹಾಜರು ಮಾಡಿದ ದಾಖಲೆಗಳನ್ನು ಪರಿಗಣಿಸಿ ನೀಡಿರುವ ಈ ಆದೇಶದಲ್ಲಿ ಕೆಲ ಗೊಂದಲ, ಅಸತ್ಯ, ಅವಾಸ್ತವಿಕ ವ್ಯಾಪ್ತಿ ಮೀರಿದ ಅಂಶಗಳಿರುವುದು ತಿಳಿದು ಬಂದಿದೆ. ಈ ಪ್ರಕರಣದ ಅರ್ಜಿದಾರರು ಮುಂದಿನ ದಿನಗಳಲ್ಲಿ ಹೈಕೋರ್ಟ್ ದ್ವಿಸದಸ್ಯ ಪೀಠ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಲ್ಲಿ ಹಿಂದಿನ ಆದೇಶದಲ್ಲಿನ ನೂನ್ಯತೆಗಳನ್ನು ಸರಿಪಡಿಸಿ ಸಂವಿಧಾನಾತ್ಮಕ ತೀರ್ಪು ನೀಡಬೇಕು. ಆ ಮೂಲಕ ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿಯಬೇಕು.
3. ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಎಸ್ ಸಿ, ಎಸ್ ಟಿ, ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಅಗತ್ಯ ಪ್ರಸ್ತಾವನೆ, ಶಿಪಾರಸ್ಸು ಗಳನ್ನು ಮಾಡಬೇಕು.
4. ಈ ಮೇಲಿನ ಹಕ್ಕೊತ್ತಾಯಗಳಿಗಾಗಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ವಕೀಲರ ಜಾಗೃತಿ ಸಭೆ ಮತ್ತು “ಮುಡಾ ಪ್ರಕರಣ- ಕೋರ್ಟುಗಳ ಆದೇಶಗಳು: ಸತ್ಯಾಸತ್ಯಾತೆ” ಪುಸ್ತಕ ಬಿಡುಗಡೆ ಮಾಡಲಾಗುವುದು. ಅಕ್ಟೋಬರ್ 15ರ ಮಂಗಳವಾರ ರಾಜ್ಯಪ್ಯಾಪಿ ಮೆರವಣಿಗೆಯ ಮೂಲಕ ತಹಸೀಲ್ದಾರ್, ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು.ಪ್ರತಿ ಹಂತದಲ್ಲಿ ನೂರಾರು ವಕೀಲರು ಭಾಗವಹಿಸಲಿದ್ದಾರೆ.
ಕರ್ನಾಟಕ ಜಾಗೃತ ವಕೀಲರ ವೇದಿಕೆ ಆಯೋಜಿಸಿದ್ದ ಸಮಾವೇಶದಲ್ಲಿ “ಮುಡಾ ಪ್ರಕರಣ- ಕೋರ್ಟುಗಳ ಆದೇಶಗಳು: ಸತ್ಯಾಸತ್ಯಾತೆ” ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು.
ಮೌರ್ಯ ಸರ್ಕಲ್ ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನ್ಯಾಯಾಂಗದ ಘನತೆಯ ಸಂರಕ್ಷಣೆಗಾಗಿ ಮಾನವ ಸರಪಳಿ ನಿರ್ಮಿಸಲಾಯಿತು.
ಸಮಾವೇಶದಲ್ಲಿ ನ್ಯಾ ಬಾಬಾಸಾಹೇಬ್ ಜಿನರಾಲ್ಕರ್, ನ್ಯಾ ವೆಂಕಟೇಶ ವೊರಸೆ, ನ್ಯಾ ಹೆಚ್ ಎ ಹಾವಿನ್, ನ್ಯಾ ಸಾಯಿಬಣ್ಣ, ನ್ಯಾ ಕೆ ಹೆಚ್ ಮಲ್ಲೆಶಪ್ಪ, ಕರ್ನಾಟಕ ಜಾಗೃತ ವೇದಿಕೆಯ ಎನ್ ಅನಂತನಾಯ್ಕ, ಹಿರಿಯ ನ್ಯಾಯವಾದಿಗಳಾದ ಎಸ್ ಬಾಲನ್, ಶಿವಶಂಕರ್ ಯಡ್ರಾಮಿ, ರಮೇಶ್ ಬದನೂರ್ ಬಾಗಲಕೋಟ, ಪುಟ್ಟಸ್ವಾಮಿಗೌಡ ಮೈಸೂರು, ಎಫ್ ವೈ ಘಾಜಿ ಸವದತ್ತಿ, ಎಂ ಎಸ್ ಕುರಿ, ರವೀಂದ್ರ ನಾಯ್ಕ ಶಿರಸಿ, ಮಲ್ಲಿಕಾರ್ಜುನ ಜಲಪಟ್ಟಿ ಬೀದರ್, ರಮಾನಂದ ಕವಳಿ, ವೇಣುಗೌಡ ಪಾಟೀಲ್ ಜಾಲಹಳ್ಳಿ, ಅನಿಶಪಾಷ ದಾವಣಗೆರೆ, ರಮೇಶಬಾಬು, ದಿವಾಕರ್ ಮತ್ತಿತರರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಕೀಲರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.