ಬೆಂಗಳೂರು : ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹಗೆ ಅಯೋಗ್ಯ ಎಂಬ ಪದ ಬಳಸಿದ್ದರಿಂದ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ ವಿರುದ್ಧ ಕೇಸ್ ದಾಖಲಾಗಿತ್ತು. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಹೈಕೋರ್ಟ್ ಇದೀಗ ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಹಾಗಾಗಿ ಶಾಸಕ ಪ್ರದೀಪ್ ಈಶ್ವರ್ ಗೆ ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೌದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಕುರಿತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಪ್ರತಾಪ್ ಸಿಂಹ ಒಬ್ಬ ಅಯೋಗ್ಯ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಕೇಸ್ ದಾಖಲಾಗಿತ್ತು. ಇಂದು ಹೈಕೋರ್ಟ್ ಅಲ್ಲಿ ಈ ಒಂದು ಪ್ರಕರಣದ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶರು ಮಾನನಷ್ಟ ಮೊಕದ್ದಮೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ.
ಪ್ರದೀಪ್ ಈಶ್ವರ್ ಹೇಳಿದ್ದೇನು?
ಅಯೋಧ್ಯಾ ಶ್ರೀ ರಾಮ ದೇವಸ್ಥಾನ ಉದ್ಘಾಟನೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ ಶಾಸಕ ಪ್ರದೀಪ್ ಈಶ್ಚರ್, ಆತನಷ್ಟು ಅಯೋಗ್ಯ, ಮುಠ್ಠಾಳ ಇನ್ನೊಬ್ಬರಿಲ್ಲ. 45 ವರ್ಷ ರಾಜಕೀಯ ಅನುಭವ ಹೊಂದಿರುವ ಸಿದ್ಧರಾಮಯ್ಯರ ಬಗ್ಗೆ ಮಾತಾಡ್ತಾರೆ. ಪ್ರತಾಪ್ ಸಿಂಹ ಅವರೇ ಬಾಯ್ ಮುಚ್ಚಿಕೊಂಡು ಇರಬೇಕು, ಬಾಯಿ ತೆವಲು ಕಡಿಮೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.
ಪ್ರತಾಪ್ ಸಿಂಹ ಕಲ್ಲು ಹಾಕಿದ್ರೆ, ನಾವ್ ನಾಲ್ಕು ಕಲ್ಲು ಹಾಕ್ತೇವೆ ಎಂದ ಪ್ರದೀಪ್ ಈಶ್ವರ್, ಸಿಎಂ ಸಿದ್ಧರಾಮಯ್ಯನವರ ಬಗ್ಗೆ ಮಾತಾಡಬೇಕಾದರೆ ನಾಲಿಗೆ ಬಿಗಿಹಿಡಿದು ಮಾತಾಡಬೇಕು ಅಂತ ಎಚ್ಚರಿಕೆ ಕೊಟ್ಟರಲ್ಲದೇ, ಶ್ರೀರಾಮಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿ ಏನೂ ಅಲ್ಲ. ನಾವೂ ಹಿಂದುಗಳೇ, ನಮಗೂ ಶ್ರೀರಾಮಚಂದ್ರ ಆರಾಧ್ಯ ದೇವರೇ, ಇಲ್ಲೂ ರಾಮನ ಭಕ್ತರಿದ್ದಾರೆ ಎಂದು ಹೇಳಿಕೆ ನೀಡಿದ್ದರು.