ಯಾದಗಿರಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ನೈತಿಕತೆ ಕೇಂದ್ರ ಸಚಿವ HD ಕುಮಾರಸ್ವಾಮಿಗೆ ಯಾವುದೇ ನೈತಿಕತೆ ಇಲ್ಲ. ಬಿ.ಎಸ್ ಯಡಿಯೂರಪ್ಪ, HD ಕುಮಾರಸ್ವಾಮಿ ಇಬ್ಬರು ಕಳ್ಳರೇ. ಕುಮಾರಸ್ವಾಮಿ ದೊಡ್ಡ ಕಳ್ಳ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಜಾಗ ವಾಪಸ್ ಕೊಟ್ಟಿದ್ದು, ಮುಖ್ಯಮಂತ್ರಿ ಪತ್ನಿ ಅವರ ನೈತಿಕತೆ ಎದ್ದು ಕಾಣುತ್ತದೆ. ಆದರೆ, ಇದನ್ನೇ ಯುಟರ್ನ್ ಹೊಡಿದ್ದಾರೆಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ.ಮುಡಾದಲ್ಲಿ ಕುಮಾರಸ್ವಾಮಿ ಕುಟುಂಬದವರ ಎಷ್ಟು ಸೈಟ್ಗಳಿವೆ ಗೊತ್ತಾ, ಆ ಬಗ್ಗೆ ತುಟ್ಟಿ ಬಿಚ್ಚದ ಅವರು, ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ ಎಂದರು.
ಮುಡಾ ವಿಷಯದಲ್ಲಿ ಸಿಎಂ ಸಿದ್ದರಾಯಮ್ಮ ಅವರ ಪಾತ್ರ ಎಲ್ಲೂ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ತಗ್ಗಿಸುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ.ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ, ಮುಡಾ ಪರ್ಯಾಯವಾಗಿ ಸ್ಥಳ ಹಂಚಿಕೆ ಮಾಡಿದೆ. ಎಷ್ಟು ಪ್ರತಿಶತ ಜಾಗ ನೀಡಬೇಕು ಎನ್ನುವುದು ಮುಡಾ ನಿರ್ಧಾರ ಮಾಡಿತ್ತು, ಅದರಂತೆ ಸೈಟ್ ಕೊಟ್ಟಿದ್ದಾರೆ ಅದರಲ್ಲಿ ತಪ್ಪೇನಿದೆ ಎಂದರು.