ಬೆಳಗಾವಿ : ಕಾರಿನಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿರುವಂತಹ ಉದ್ಯಮಿಯೊಬ್ಬರ ಶವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಶವ ಪತ್ತೆಯಾಗಿರುವ ಈ ಘಟನೆ ನಡೆದಿದೆ.ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಹೆಚ್ಚುವರಿ ಎಸ್ ಪಿ ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವ್ಯಕ್ತಿಯನ್ನು ಗ್ರಾನೈಟ್ ಉದ್ಯಮಿ ಫೈರೋಜ್ ಬಡಗಾಂವಿ (40) ಎಂದು ಗುರುತಿಸಲಾಗಿದೆ. ಫೈರೋಜ್ ಅವರು ಚಿಕ್ಕೋಡಿಯ ಮುಲ್ಲಾ ಪ್ಲಾಟ್ ನಿವಾಸಿ ಎಂದು ತಿಳಿದುಬಂದಿದೆ. ಇಂದು ಅವರ ಶವ ಕಾರಿನಲ್ಲಿ ಸಂಪೂರ್ಣ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜೈನಾಪೂರ ಗ್ರಾಮದ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿ ಪಕ್ಕ ಅವರ ಕಾರು ಬೆಂಕಿಗೆ ಆಹುತಿಯಾಗಿದೆ.
ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಚಾಲಕನ ಸೀಟಿನಲ್ಲಿ ಕುಳಿತಿದ್ದ ಫೈರೋಜ್ ಕೂಡ ಬೆಂದುಹೋಗಿದ್ದಾರೆ. ಮೇಲ್ನೋಟಕ್ಕೆ ಅಪಘಾತವಾಗಿ ಬೆಂಕಿ ಹೊತ್ತಿಕೊಂಡಂತೆ ಕಾಣುತ್ತಿದೆ. ಆದರೂ ಸಾವು ಅನುಮಾನಾಸ್ಪದವಾಗಿದೆ. ಮೃತನ ಕುಟುಂಬದವರ ದೂರು ಆಧರಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.