ನವದೆಹಲಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡಿ ಸಂಕಷ್ಟ ಎದುರಾಗಿದೆ. ಇದರ ಮಧ್ಯ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, ಈ ಹಿಂದೆ ಸಿಎಂ ಸಿದ್ದರಾಮಯ್ಯ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿ ಡಿನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿದ್ದರಾಮಯ್ಯ ನುಂಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲನೇ ಆರೋಪಿಯಾಗಿದ್ದು, ಒಟ್ಟು 18 ಆರೋಪಿಗಳು ಇದ್ದಾರೆ.ನ್ಯಾಯಾಲಯದಿಂದ ಸಿದ್ದರಾಮಯ್ಯ ವಿರುದ್ಧ ತೀರ್ಪು ಕೂಡ ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್ ನಿಂದ ರಿಲೀಫ್ ಪಡೆದುಕೊಂಡರು ಎಂದು ತಿಳಿಸಿದರು.
ಈ ಒಂದು ಪ್ರಕರಣ 14 ಸೈಟ್ ಗಿಂತಲೂ ದೊಡ್ಡ ಹಗರಣವಾಗಿದೆ. ಊರಿಗೆ ಬುದ್ದಿ ಹೇಳೋರು ಇಲ್ಲಿ ಏನೇನು ಮಾಡಿದ್ದಿರಿ, ಸತ್ಯ ಹೇಳಿ. ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಇನ್ನು ಎರಡು ಪ್ರಕರಣಗಳಿವೆ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಸಿಎಂ ಪತ್ನಿ 14 ನಿವೇಶನಗಳನ್ನು ವಾಪಸ್ ಕೊಡುವ ವಿಚಾರವಾಗಿ, ಕಳ್ಳತನ ಮಾಡಿ ಆಮೇಲೆ ತಪ್ಪಾಯಿತು ಎಂದು ಹೇಳಿದ ಹಾಗಿದೆ.ಸಿಎಂ ಪತ್ನಿ ನನಗೂ ಸಹೋದರಿ ಸಮಾನ. ಅವರ ಬಗ್ಗೆ ಗೌರವ ಇಟ್ಟಿಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ.ಸಿಎಂ ಸಿದ್ದರಾಮಯ್ಯ ನನ್ನ ಬಗ್ಗೆ ಯಾವಾಗಲೂ ಹಿಟ್ ಅಂಡ್ ರನ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಹಾಗಾದರೆ ಇವರೇನು? ಯೂಟರ್ನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.