ಬೆಂಗಳೂರು : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ನಡುವೆ ಪರಸ್ಪರ ವಾಕ್ಸಮರ ತಾರಕಕ್ಕೆ ಏರಿದ್ದು, ಇದೀಗ ಎಡಿಜಿಪಿ ಯವರು ತಮ್ಮ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಹಂದಿಗಳ ಜೊತೆಗೆ ಗಲಾಟೆ ಬೇಡ ಎಂದು ಉಲ್ಲೇಖಿಸಿದ್ದರು. ಈ ಒಂದು ವಿಚಾರವಾಗಿ ಇದೀಗ ಎಚ್ ಡಿ ಕುಮಾರಸ್ವಾಮಿ ವಿ ಡಿಜಿಪಿ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಹೌದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹೆಚ್‍ಡಿ ಕುಮಾರಸ್ವಾಮಿ ಪತ್ರ ಬರೆದಿದ್ದು,ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ್ ಸೇವಾ ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಪರಿಶೀಲಿಸಬೇಕು.ಚಂದ್ರಶೇಖರ್ ವಂಚನೆಗಳ ಬಗ್ಗೆ ಸ್ವತಂತ್ರ ಇಲಾಖಾ ತನಿಖೆ ನಡೆಸಬೇಕು. ಕರ್ನಾಟಕ ಕೇಡರ್ ಅಲ್ಲದಿದ್ದರೂ ಇಲ್ಲಿ ಇರಲು ನಿಯಮ ಉಲ್ಲಂಘಿಸಿದ್ದಾರೆಯೇ ಎಂದು ಕೂಡ ಪರಿಶೀಲಿಸಬೇಕಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕುಮಾರಸ್ವಾಮಿ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸುದ್ದಿಗೋಷ್ಠಿಯಲ್ಲಿ ಗಂಭೀರವಾದಂತಹ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಎಡಿಜಿಪಿ ಚಂದ್ರಶೇಖರ್ ಅವರು ತಮ್ಮ ಸಿಬ್ಬಂದಿಗೆ ಪತ್ರದ ಮೂಲಕ ಎಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದು, ಹಂದಿಗಳ ಜೊತೆಗೆ ಗಲಾಟೆ ಬೇಡ. ಅವುಗಳ ಜೊತೆಗೆ ಗಲಾಟೆ ಮಾಡಿದರೆ ನಾವು ಕೊಳಕಾಗುತ್ತೇವೆ ಎಂದು ಬರೆದಿದ್ದರು. ಈ ವಿಚಾರವಾಗಿ ಇದೀಗ ಎಚ್ ಡಿ ಕುಮಾರಸ್ವಾಮಿ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.