ಮೈಸೂರು : ಇಂದು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 245 ವೀಳ್ಯದೆಲೆ ಬೆಳೆಗಾರರಿಗೆ ತಲಾ 0.5 ಗುಂಟೆ ಜಾಗ ನೀಡುವುದು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ಒಂದೆರಡು ತಿಂಗಳು ತೊಂದ್ರೆ ಕೊಡಬಹುದು ಅಷ್ಟೆ ಆದರೆ ಯಾವುದೇ ಷಡ್ಯಂತ್ರಗಳಿಗೆ ಹೆದರಲ್ಲ ಎಂದು ಗುಡುಗಿದರು.
ನನ್ನ ರಾಜಕೀಯ ಬದುಕಿನಲ್ಲಿ ನಯಾಪೈಸೆ ಭ್ರಷ್ಟ ಹಣಕ್ಕಾಗಿ ಕೈಚಾಚಿಲ್ಲ. ಆತ್ಮಸಾಕ್ಷಿಯಾಗಿ ನಾನು ಸರಿಯಾಗಿದ್ದೀನಿ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ. ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ. ಬಹಳ ಜನ ಬಂದು ಬಂದು ನನಗೆ, ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ ಅಂತಾರೆ. ನಾನು ಷಡ್ಯಂತ್ರಗಳಿಗೆ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದ್ರೆ, ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ರಾಜಕೀಯವಾಗಿ ಇದನ್ನೆಲ್ಲಾ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಅಶೋಕಪುರಂನ ಅಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲಾ ಕಾರ್ಯಕ್ರಮಗಳ ಪಟ್ಟಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ಅವರಿಗೆ ಸೂಚಿಸಿದ್ದೇನೆ. ಅಗತ್ಯ ಅನುದಾನ ಕೊಡಲು ಸರ್ಕಾರ ಬದ್ದವಾಗಿದೆ. ನಾವೆಲ್ಲಾ ಅಂಬೇಡ್ಕರ್ ವಾದಿಗಳು. ಅವಕಾಶಗಳಿಂದ ವಂಚಿತರಾದವರೆಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯವಾಗಿದೆ. ಇದೆ ಸಂದರ್ಭದಲ್ಲಿ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಈರನಗೆರೆ ಬದನೆಕಾಯಿ ಮೈಸೂರಿನ ಹೆಮ್ಮೆಯ ಸಾಂಪ್ರದಾಯಿಕ ಬೆಳೆಗಳಾಗಿದ್ದು, ಈ ಬೆಳೆಗಳ ರಕ್ಷಣೆ, ವಿಸ್ತರಣೆಗೆ ಸರ್ಕಾರದಿಂದ ಕಾರ್ಯಕ್ರಮ ಘೋಷಣೆ ಮಾಡುತ್ತೇನೆ ಎಂದು ಹೇಳಿದರು.