ಬೆಂಗಳೂರು: ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ, ಬಗರ್ ಹುಕುಂ ಸಾಗುವಳಿ ಚೀಟಿ ನಿರೀಕ್ಷೆಯಲ್ಲಿದ್ದಂತ ರೈತರಿಗೆ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ. ಅದೇನೆಂದರೇ ಬಗರ್ ಹುಕುಂ ವಿಲೇ ಪ್ರಕ್ರಿಯೆ ಆರಂಭಗೊಳಿಸಲಾಗಿದೆ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಗರ್ ಹುಕುಂ ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9.80ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅನರ್ಹ ಅರ್ಜಿಗಳೇ ಅಧಿಕ. ಈ ಅರ್ಜಿಗಳ ವಿಲೇವಾರಿಗೆ ಈಗಾಗಲೇ ರಾಜ್ಯಾದ್ಯಂತ 160 ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ತಿಂಗಳೂ ಕನಿಷ್ಟ ಮಟ್ಟದ ಅರ್ಜಿ ವಿಲೇ ಆಗಬೇಕು, ಮುಂದಿನ ಎಂಟು ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನೂ ವಿಲೇಗೊಳಿಸಬೇಕು. ಅಲ್ಲದೆ, ಅರ್ಹರಿಗೆ ಭೂ ಮಂಜೂರು ಮಾಡಬೇಕು ಎಂದು ಈಗಾಗಲೇ ತಹಶೀಲ್ದಾರ್ ಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ಮಟ್ಟದಲ್ಲಿ ಕನಿಷ್ಟ 4 ಲಕ್ಷ ರೈತರಿಗೆ ಸಂಬಂಧಿಸಿದ 69,437 ಸರ್ವೇ ನಂಬರ್ಗಳಲ್ಲಿ ನಮೂನೆ 1-5 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅಂದರೆ ಸಂಬಂಧ ಪಟ್ಟ ರೈತರ ಕಡತಗಳನ್ನು ತಯಾರು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ದಾಖಲೆಗಳನ್ನು ಒಂದುಗೂಡಿಸಿ ರೈತರು ಪೋಡಿಗೆ ಅರ್ಹರೇ ಎಂದು ಗುರುತಿಸಲಾಗುವುದು. ಆರ್ಐ, ಶಿರಸ್ತೇದಾರ್ ಹಾಗೂ ತಹಶೀಲ್ದಾರ್ ಈ ಬಗ್ಗೆ ಪರಿಗಣಿಸಿ ನಂತರ ನಮೂನೆ 6-10 ರ ಪ್ರಕ್ರಿಯೆಗೆ ಸರ್ವೇ ಇಲಾಖೆಗೆ ಪೋಡಿಗೆ ಶೀಫಾರಸು ಮಾಡುತ್ತಾರೆ. ತದನಂತರ ರೈತರಿಗೆ ಪೋಡಿ ಲಭ್ಯವಾಗುತ್ತದೆ” ಎಂದರು.
ರಾಜ್ಯಾದ್ಯಂತ ಶೇ. 81.74 ರಷ್ಟು ಆಧಾರ್ ಸೀಡಿಂಗ್
ರಾಜ್ಯಾದ್ಯಂತ ಈವರೆಗೆ ಶೇ. 81.74 ರಷ್ಟು ಆಧಾರ್ ಸೀಡಿಂಗ್ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ರಾಜ್ಯಾದ್ಯಂತ 4,09,87,831 ರಷ್ಟು ಜಮೀನುಗಳ ಆಧಾರ್ ಸೀಡಿಂಗ್ ಮಾಡುವುದು ಇಲಾಖೆಯ ಗುರಿ. ಈ ಪೈಕಿ ಸುಮಾರು 61 ಲಕ್ಷ ಜಮೀನುಗಳು ಕೃಷಿಯೇತರ ಚಟುವಟಿಕೆಗೆ ಉಪಯೋಗವಾಗುತ್ತಿದೆ. ಇದನ್ನು ಆಧಾರ್ ಸೀಡಿಂಗ್ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನಿವೇಶನಗಳು ಇರುತ್ತದೆ. ನಾವು ಕೃಷಿ ಭೂಮಿಯಲ್ಲಿ ಮಾತ್ರ ಸೀಡಿಂಗ್ ಮಾಡಲು ಸಾಧ್ಯ. ಈವರೆಗೆ 2.15 ಕೋಟಿ ಜಮೀನುಗಳಿಗೆ ಆಧಾರ್ ಅಥೆಂಟಿಫಿಕೇಷನ್ ಕೆಲಸ ಮುಗಿಸಲಾಗಿದ್ದು, ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 81.74 ರಷ್ಟು ಪ್ರಗತಿ ಸಾಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಮುಂದುವರೆದು, “ರಾಜ್ಯಾದ್ಯಂತ 48,16,813 ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. ಆದರೆ, ಅವರ ಹೆಸರಲ್ಲೇ ಪಹಣಿ ಮುಂದುವರೆಯುತ್ತಿದೆ. ಈ ಎಲ್ಲರಿಗೂ ಶೀಘ್ರದಲ್ಲಿ ಫವತಿ ಖಾತೆ ಆಂದೋಲನದ ಅಡಿಯಲ್ಲಿ ಖಾತೆ ಬದಲಿಸಿಕೊಡಲಾಗುವುದು” ಎಂದು ಅವರು ತಿಳಿಸಿದರು.